ಕೆಲಸವಿಲ್ಲದ ಖೂಬಾರಿಂದ ನೀಚ ರಾಜಕೀಯ

Eshwar Khandre - Copy
Published on

ಬೀದರ್: ಜನರಿಂದ ತಿರಸ್ಕೃತವಾಗಿ ಕೆಲಸವಿಲ್ಲದೆ ಬೀದಿ ಬೀದಿ ಅಲೆಯುತ್ತಿರುವ ಭಗವಂತ ಖೂಬಾ, ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯಮಂತ್ರಿಯವರನ್ನು ನಗರ ನಕ್ಸಲ ಎನ್ನುವಷ್ಟು ನೀಚ ರಾಜಕೀಯದ ಪರಮಾವಧಿ ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಖಂಡಿಸಿದ್ದಾರೆ.

ಕಾಂಗ್ರೆಸ್ ಸಂಸದ ಹಾಗೂ ರಾಷ್ಟ್ರೀಯ ನಾಯಕ ರಾಹುಲ್ ಗಾಂಧೀ ಅವರ ಬಗ್ಗೆಯೂ ಹಗುರವಾಗಿ ಮಾತನಾಡಿರುವ ಖೂಬಾ 10 ವರ್ಷ ಸಂಸದರಾಗಿ, ನಂತರ ಕೇಂದ್ರ ಸಚಿವರಾಗಿ ಮಾಡಿದ್ದು ಶೂನ್ಯ ಸಾಧನೆ. ಜಿಲ್ಲೆಗೆ ಏನೂ ಕೊಡುಗೆ ನೀಡದ ಅವರು ಖಾಲಿ ಡಬ್ಬ ಇದ್ದಂತೆ. ಖಾಲಿ ಡಬ್ಬ ಸದಾ ಹೆಚ್ಚು ಶಬ್ದ ಮಾಡುತ್ತದೆ ಎಂದು ಹೇಳಿದರು.

ಸರ್ವರಿಗೂ ಸಾಮಾಜಿಕ ನ್ಯಾಯ ದೊರಕಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರಮಿಸುತ್ತಿದ್ದಾರೆ. ಪಂಚ ಗ್ಯಾರಂಟಿಗಳ ಮೂಲಕ ಕಡು ಬಡವರ ಜೀವನದಲ್ಲಿ ಹೊಸ ಹುರುಪು ತಂದಿದ್ದಾರೆ. ಜನಪ್ರಿಯ ಮುಖ್ಯಮಂತ್ರಿಗಳ ಬಗ್ಗೆ ಮಾಜಿ ಸಂಸದರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದರು.

ಕೋವಿಡ್ ಕಾಲದಲ್ಲಿ ಬೀದರ್ ಜನತೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಬೀದಿಯಲ್ಲಿ ಬಿದ್ದಿದ್ದಾಗ ಅವರದೇ ಸರ್ಕಾರ ಇದ್ದರೂ ಜನರ ನೆರವಿಗೆ ಖೂಬಾ ಬರಲಿಲ್ಲ. ಹೇಡಿಯಂತೆ ಬಚ್ಚಿಟ್ಟುಕೊಂಡಿದ್ದರು. ರೆಮಿಡಿ ಸಿವೀರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದರೂ ನೊಂದವರ ಕಣ್ಣೀರು ಒರೆಸಲಿಲ್ಲ. ಖೂಬಾ ಜನವಿರೋಧಿ ನೀತಿಗೆ ಮತದಾರರೇ ಅವರನ್ನು ಸೋಲಿಸಿ ಮನೆಗೆ ಕಳಿಸಿದರು. ಈಗ ಕೆಲಸವಿಲ್ಲದ ಖೂಬಾ ನಿತ್ಯ ಪತ್ರಿಕಾ ಹೇಳಿಕೆ ನೀಡುತ್ತಾ ಕಾಲ ದೂಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಶ್ವಾನ ಬೊಗಳಿದರೆ ಸ್ವರ್ಗಲೋಕಕ್ಕೆ ಕೇಡೆ ಎಂಬ ಗಾದೆ ಕನ್ನಡದಲ್ಲಿದೆ ಹೀಗಾಗಿ ಇಷ್ಟು ದಿನ ತಾವು ಅವರ ಯಾವುದೇ ಹೇಳಿಕೆಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಮುಖ್ಯಮಂತ್ರಿ ಮತ್ತು ರಾಹುಲ್ ಗಾಂಧೀ ಅವರ ಬಗ್ಗೆ ಮಾತನಾಡಿರುವುದನ್ನು ನಾನು ಉಗ್ರ ಶಬ್ದಗಳಿಂದ ಖಂಡಿಸುತ್ತಿದ್ದೇನೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net