ಕಮಲನಗರ: ನವರಾತ್ರಿ ಉತ್ಸವದ ಮೊದಲನೇ ದಿನವಾದ ಸೋಮವಾರ ಶಾಸಕ ಪ್ರಭು ಚವ್ಹಾಣ ಅವರು ಸ್ವಗ್ರಾಮ ಬೋಂತಿ ತಾಂಡಾದಲ್ಲಿನ ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ಬೆಳಗ್ಗೆಯಿಂದ ಕುಟುಂಬ ಸಮೇತರಾಗಿ ಪೂಜೆಗಳನ್ನು ಆರಂಭಿಸಿದ ಶಾಸಕರು, ಇಚ್ಛಾಪೂರ್ತಿ ಮಾತಾ ಜಗದಂಬಾ, ಸಂತ ಸೇವಾಲಾಲ್ ಮಹಾರಾಜರು ಮತ್ತು ರಾಮರಾವ ಮಹಾರಾಜರ ದೇವಸ್ಥಾನದಲ್ಲಿ ಪೂಜೆ, ಅರ್ಚನೆ, ಅಭಿಷೇಕಗಳನ್ನು ಭಕ್ತಿ ಭಾವದಿಂದ ನೆರವೇರಿಸಿದರು.
ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಿಯ ಪರಮ ಭಕ್ತರಾಗಿರುವ ಶಾಸಕರು ನವರಾತ್ರಿ ಉತ್ಸವವನ್ನು ವೈಭವದಿಂದ ಆಚರಿಸುತ್ತಾರೆ. ನವರಾತ್ರಿ ಉತ್ಸವ ಮುಗಿಯುವ ವರೆಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜೆ, ಅರ್ಚನೆಗಳನ್ನು ನೆರವೇರಿಸುತ್ತಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕುಲದೇವತೆಯಾಗಿರುವ ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಿಯ ಶಕ್ತಿ ಅಪಾರ. ವಿನಾಶಕ್ಕಿಳಿದ ರಾಕ್ಷಸರನ್ನು ಸಂಹರಿಸಿ ಲೋಕಕಲ್ಯಾಣ ಮಾಡಿದ ಜಗನ್ಮಾತೆ. ನ್ಯಾಯವನ್ನು ಎತ್ತಿ ಹಿಡಿಯುವವಳು. ಕರುಣಾಮಯಿ ತಾಯಿ. ಕಷ್ಟವೆಂದು ಬರುವ ಭಕ್ತಾದಿಗಳಿಗೆ ಕೇಳಿದ ವರವನ್ನು ನೀಡುವ ಮಹಾ ದೇವತೆ. ಜಗನ್ಮಾತೆಯ ಕೃಪೆ ಮತ್ತು ಮಹಾ ಜನತೆಯ ಆಶೀರ್ವಾದದಿಂದಾಗಿ ಜನಸೇವೆ ಮಾಡುತ್ತಿದ್ದೇನೆ ಎಂದರು.
ಪ್ರತಿ ವರ್ಷ ಬೋಂತಿ ತಾಂಡಾದಲ್ಲಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತೇನೆ. ದೇವಿಗೆ ವಿಶೇಷ ಪೂಜೆ ನೆರವೇರಿಸಿ ಕ್ಷೇತ್ರದ ಜನತೆ, ರೈತರು, ಕಾರ್ಮಿಕರು ಸೇರಿದಂತೆ ಕ್ಷೇತ್ರದ ಮಹಾಜನತೆಯ ಜೀವನ ಸುಖಮಯವಾಗಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕುಟುಂಬಸ್ಥರು, ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸಾರ್ವಜನಿಕರ ಭೇಟಿ: ನವರಾತ್ರಿ ಉತ್ಸವದ ನಿಮಿತ್ತ ಗ್ರಾಮದಲ್ಲಿ ಪ್ರತಿದಿನ ಬೆಳಗ್ಗೆ ಪೂಜೆ, ಅರ್ಚನೆ, ಹೋಮ, ಹವನಗಳು ನಡೆಯುತ್ತವೆ. ಸೆ.28 ರಂದು ತುಳಜಾಪುರಕ್ಕೆ ತೆರಳಿ ಭವಾನಿ ಮಾತೆಯ ದರ್ಶನ ಪಡೆಯುತ್ತೇನೆ. ನವರಾತ್ರಿಯ ಸಂದರ್ಭದಲ್ಲಿ ಸಾರ್ವಜನಿಕರು ಪ್ರತಿದಿನ ಸಂಜೆ 4.30 ರಿಂದ 6.30 ಗಂಟೆವರೆಗೆ ಭೇಟಿ ಮಾಡಬಹುದೆಂದು ಶಾಸಕರು ತಿಳಿಸಿದ್ದಾರೆ.