

ಬೀದರ್: ಕ್ರೀಡೆಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕೆ ಹೊರತು ದ್ವೇಷಕ್ಕೆ ಅವಕಾಶ ಕೊಡಬಾರದು ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪ ನಿರ್ದೇಶಕ ಚಂದ್ರಕಾಂತ ಶಹಾಬಾದಕರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಎನ್.ಎಫ್. ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಶ್ರೀ ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜು ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳು ಸಾಮಥ್ರ್ಯ ಒರೆಗೆ ಹಚ್ಚಲು ಅವಕಾಶ ಕಲ್ಪಿಸುತ್ತವೆ. ಹೀಗಾಗಿ ಕ್ರೀಡೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಶ್ರೀ ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಚಂದ್ರಪ್ಪ ಭತಮುರ್ಗೆ ಮಾತನಾಡಿ, ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯ ವೃದ್ಧಿಸಿಕೊಳ್ಳಲು ಕ್ರೀಡೆ ಬಹು ಪ್ರಯೋಜನಕಾರಿ ಎಂದು ಹೇಳಿದರು.
ಸರಿಯಾದ ಮಾರ್ಗದರ್ಶನ ಇಲ್ಲದ ಕಾರಣ ಬಹಳಷ್ಟು ವಿದ್ಯಾರ್ಥಿಗಳು ಕ್ರೀಡೆಯಿಂದ ದೂರ ಉಳಿಯುತ್ತಿದ್ದಾರೆ ಎಂದು ತಿಳಿಸಿದರು.
ಸಿದ್ಧಾರ್ಥ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಪ್ರಭು ಎಸ್. ಧ್ವಜಾರೋಹಣ ಮಾಡಿದರು. ಡಾ. ಚಂದ್ರಕಾಂತ ಗಂಗಶೆಟ್ಟಿ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಡಾ. ವಿಜಯಕುಮಾರ ಪಾಟೀಲ ಹೆಡಗಾಪುರ, ಬಾಲಾಜಿ ವಾಡೇಕರ್, ಶಿವರಾಜ ಬಿರಾದಾರ, ಎಲ್ಜೆಬೆತ್ ಸ್ವರೂಪರಾಣಿ, ರಾಜಶೇಖರ ಮಂಗಲಗಿ, ಡಾ. ಜೈಸೇನಪ್ರಸಾದ್, ರಮೇಶಕುಮಾರ ಪಾಟೀಲ, ವೀರಣ್ಣ ಕೆ, ಚಂದ್ರಕಲಾ ಕೆ, ಸಂಜಯ್ ಜೆಸ್ಸಿ, ಧನರಾಜ ಖೇಣಿ, ಶಿವಪುತ್ರ ಶಿನ್ನೂರ, ನಾಗನಾಥ ಬಿರಾದಾರ ಉಪಸ್ಥಿತರಿದ್ದರು. ಉಪನ್ಯಾಸಕ ಎಸ್.ಎಂ. ಐನಾಪುರ ನಿರೂಪಿಸಿದರು. ಬಸವರಾಜ ಹೆಗ್ಗೆ ವಂದಿಸಿದರು.