ಪಂಚ ಪೀಠಾಧೀಶರ ಹೆಸರಲ್ಲಿ ಸಸಿ ನೆಡುವಿಕೆ

Ek Lakh Ped Maa Ke Naam Abhiyan At New Delhi Panchmukhi shivalaya Mandir
Published on

ಬೀದರ್: ಏಕ್ ಲಾಖ್ ಪೇಡ್ ಮಾ ಕೇ ನಾಮ್ ಅಭಿಯಾನ ಅಂಗವಾಗಿ ನವದೆಹಲಿಯ ಪಂಚಮುಖಿ ಶಿವಾಲಯ- ಬಿರ್ಲಾ ಮಂದಿರದಲ್ಲಿ ಪಂಚ ಪೀಠಾಧೀಶರ ಹೆಸರಲ್ಲಿ ಈಚೆಗೆ ಸಸಿಗಳನ್ನು ನೆಡಲಾಯಿತು.

ಕೇದಾರ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಸಸಿಗಳನ್ನು ನೆಟ್ಟರು.

ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಪೀಠದ ಮಾತೆ ಕರುಣಾದೇವಿ ಅವರ ಹೆಸರಲ್ಲಿ ದೇಶದಾದ್ಯಂತ ಸಸಿ ನೆಡುವಿಕೆ ಹಾಗೂ ವಿತರಣೆ ಅಭಿಯಾನ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ. ಬೀದರ್‍ನ ಸಂಘ ಸಂಸ್ಥೆಗಳ ಗುರು ಭಕ್ತಿ ಹಾಗೂ ಪರಿಸರ ಕಾಳಜಿ ಮಾದರಿಯಾಗಿದೆ ಎಂದು ಅವರು ಹೇಳಿದರು.

ಅಭಿಯಾನದ ರೂವಾರಿಯೂ ಆದ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ಅಭಿಯಾನದ ಪ್ರಯುಕ್ತ ದೇಶದ ವಿವಿಧ ಭಾಗಗಳಲ್ಲಿ ಬಿಲ್ವಪತ್ರಿ ಸೇರಿ ಈಗಾಗಲೇ 85 ಸಾವಿರ ಸಸಿಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಪಂಚ ಪೀಠಗಳು ಮಾನವ ಕಲ್ಯಾಣಕ್ಕೆ ಶ್ರಮಿಸುತ್ತಿವೆ. ನಿರಂತರ ಸಮಾಜೋಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ. ಪೀಠಗಳ ಕಾರ್ಯವನ್ನು ಗೌರವಿಸಲು ಪಂಚ ಪೀಠಾಧೀಶರ ಹೆಸರಲ್ಲಿ ಸಸಿ ನೆಡಲಾಗಿದೆ ಎಂದು ಹೇಳಿದರು.

ವೀರಶೈವ ಮುಖಂಡ ಸತೀಶ್ ಕೆಂಭಾವಿಮಠ, ಹರಿಯಾಣ ವೀರಶೈವ ಸಮಾಜದ ಅಧ್ಯಕ್ಷ ಸೋಮವೀರ ಬೆನಿವಾಲ್, ಅಲ್ಕಾ ಚೌಧರಿ, ದೇವಾಲಯದ ಪ್ರಧಾನ ಅರ್ಚಕ ರೋಶನ್‍ಕಾಲ್ ಚತುರ್ವೇದಿ ಮತ್ತಿತರ ಗಣ್ಯರು ಹಾಗೂ ಭಕ್ತರು ಹಾಜರಿದ್ದರು.

ಬೀದರ್‍ನ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ, ಶ್ರೀ ಜಗದ್ಗುರು ಪಂಚಾಚಾರ್ಯ ಯುವಕ ಸಂಘ, ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಪೀಠ, ನೌಬಾದ್‍ನ ಜ್ಞಾನ ಶಿವಯೋಗಾಶ್ರಮ, ಈಶ್ವರಿ ಮಹಿಳಾ ಮಂಡಳ ಹಾಗೂ ಆರತಿ ಮಹಿಳಾ ವಿಕಾಸ ಸಮಿತಿ ವತಿಯಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net