

ಬೀದರ್: ಸೆ. 22 ರಿಂದ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕ್ರೈಸ್ತರು ಜಾತಿ ಮತ್ತು ಧರ್ಮದ ಕಾಲಂನಲ್ಲಿ ಕ್ರೈಸ್ತ ಎಂದೇ ಬರೆಸಬೇಕು ಎಂದು ಇಂಡಿಯನ್ ಕ್ರಿಶ್ಚಿಯನ್ ವೆಲ್‍ಫೇರ್ ಅಸೋಸಿಯೇಷನ್ ರಾಜ್ಯ ಅಧ್ಯಕ್ಷ ಸಂಜಯ್ ಜಾಗೀರದಾರ್ ಮನವಿ ಮಾಡಿದ್ದಾರೆ.
ಸಮೀಕ್ಷೆಯಲ್ಲಿ ಎಲ್ಲರೂ ಒಂದೇ ರೀತಿ ಬರೆಸಿದರೆ ಸರ್ಕಾರಕ್ಕೆ ಸಮುದಾಯದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಸ್ಪಷ್ಟ ಚಿತ್ರಣ ಸಿಗಲಿದೆ. ಸಮುದಾಯದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಸಹಾಯವಾಗಲಿದೆ ಎಂದು ಹೇಳಿದ್ದಾರೆ.
ಜಾತಿ ಮತ್ತು ಧರ್ಮದ ಕಾಲಂನಲ್ಲಿ ಕ್ರೈಸ್ತ ಎಂದು ನಮೂದಿಸುವುದರಿಂದ ಸಮುದಾಯಕ್ಕೆ ಒಳಿತಾಗಲಿದೆ. ಹೀಗಾಗಿ ಈ ವಿಷಯದಲ್ಲಿ ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲ ಕ್ರೈಸ್ತ ಧರ್ಮದ ಗುರುಗಳು ಚರ್ಚ್‍ಗಳಲ್ಲಿ ಈ ಕುರಿತು ಜನ ಜಾಗೃತಿ ಮೂಡಿಸಬೇಕು. ಕ್ರೈಸ್ತ ಸಂಘಟನೆಗಳ ಪದಾಧಿಕಾರಿಗಳು ಸಮೀಕ್ಷೆಯಿಂದ ಯಾರೂ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಕೋರಿದ್ದಾರೆ.