

ಬೀದರ್: ಕಮಲನಗರ ತಾಲ್ಲೂಕಿನ ಡೊಣಗಾಂವ್‍ವಾಡಿ ಕೊನೆಗೂ ಬಸ್ ಮುಖ ಕಂಡಿದೆ.
ಔರಾದ್‍ನಿಂದ ಏಕಂಬಾ, ಚಿಮ್ಮೆಗಾಂವ್, ಹಂದಿಕೇರಾ, ಡೊಣಗಾಂವ್‍ವಾಡಿ, ಡೊಣಗಾಂವ್, ಕಮಲನಗರ ಮಾರ್ಗವಾಗಿ ಭಾಲ್ಕಿಗೆ ಆರಂಭಿಸಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೊಸ ಬಸ್ ಮೊದಲ ಬಾರಿ ಗ್ರಾಮಕ್ಕೆ ಬಂದಾಗ ಗ್ರಾಮಸ್ಥರು ಬ್ಯಾಂಡ್ ಬಾಜಾದೊಂದಿಗೆ ಸ್ವಾಗತಿಸಿ ಬರಮಾಡಿಕೊಂಡರು. ಬಸ್‍ಗೆ ಬಾಳೆ ದಿಂಡು, ಕಬ್ಬು ಕಟ್ಟಿ, ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದರು. ಪಟಾಕಿ ಸಿಡಿಸಿದರು. ನೆರೆದವರಿಗೆ ಸಿಹಿ ಹಂಚಿದರು.
ಔರಾದ್‍ನಿಂದ ಏಕಂಬಾ, ಚಿಮ್ಮೆಗಾಂವ್, ಹಂದಿಕೇರಾ, ಡೊಣಗಾಂವ್‍ವಾಡಿ, ಡೊಣಗಾಂವ್, ಕಮಲನಗರ ಮಾರ್ಗವಾಗಿ ಭಾಲ್ಕಿಗೆ ಬಸ್ ಓಡಿಸಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಮಾಡಿದ್ದೆ. ಸಚಿವದ್ವಯರ ಸೂಚನೆ ಮೇರೆಗೆ ಈ ಮಾರ್ಗದಲ್ಲಿ ಹೊಸ ಬಸ್ ಸಂಚಾರ ಶುರು ಮಾಡಲಾಗಿದೆ ಎಂದು ಕಾಂಗ್ರೆಸ್ ಕಿಸಾನ್ ವಿಭಾಗದ ರಾಷ್ಟ್ರೀಯ ಸಂಯೋಜಕ ಪ್ರಕಾಶ ಘಾಳೆ ಹೇಳಿದರು.
ಸ್ವಾತಂತ್ರ್ಯ ನಂತರ ಡೊಣಗಾಂವ್‍ವಾಡಿ ಗ್ರಾಮಕ್ಕೆ ಬಸ್ ಸೌಕರ್ಯವೇ ಇರಲಿಲ್ಲ. ಹಿಂದೆ ಕುರುಬರವಾಡಿ, ಮಾಳೆಗಾಂವ್, ಚಿಮ್ಮೆಗಾಂವ್, ಹಂದಿಕೇರಾ, ದೋಪರವಾಡಿ, ಡೊಣಗಾಂವ್‍ವಾಡಿ ಗ್ರಾಮಸ್ಥರಿಗೆ ನೇರವಾಗಿ ತಾಲ್ಲೂಕು ಕೇಂದ್ರ ಕಮಲನಗರಕ್ಕೆ ಹೋಗಲು ಬಸ್‍ಗಳು ಇರಲಿಲ್ಲ. ಔರಾದ್ ಇಲ್ಲವೇ ಉದಗಿರಕ್ಕೆ ತೆರಳಿ ಅಲ್ಲಿಂದ ಕಮಲನಗರಕ್ಕೆ ಹೋಗಬೇಕಾಗುತ್ತಿತ್ತು ಎಂದು ತಿಳಿಸಿದರು.
ಇದೀಗ ನಿತ್ಯ ಎರಡು ಟ್ರಿಪ್ ಬಸ್ ಸಂಚಾರಕ್ಕೆ ಚಾಲನೆ ನೀಡಿರುವುದರಿಂದ ಈ ಗ್ರಾಮಗಳ 20 ಸಾವಿರ ಜನರಿಗೆ ಶಿಕ್ಷಣ, ಆಸ್ಪತ್ರೆ, ಸರ್ಕಾರಿ ಕಚೇರಿ ಸೇರಿದಂತೆ ವಿವಿಧ ಕೆಲಸದ ನಿಮಿತ್ತ ತಾಲ್ಲೂಕು ಕೇಂದ್ರಕ್ಕೆ ತೆರಳಲು ಅನುಕೂಲವಾಗಿದೆ. ಡೊಣಗಾಂವ್‍ವಾಡಿ ಗ್ರಾಮಸ್ಥರು ವಿವಿಧೆಡೆ ನಡೆದುಕೊಂಡು ಹೋಗುವುದು ತಪ್ಪಿದೆ ಎಂದು ಹೇಳಿದರು.
ಹಿಂದೆ ಚಿಮ್ಮೆಗಾಂವ್-ಹಂದಿಕೇರಾ ಗ್ರಾಮದ ಹೊರವಲಯದಿಂದಲೇ ಬಸ್ ಸಂಚಾರ ಇತ್ತು. ಭೀಮಣ್ಣ ಖಂಡ್ರೆ ಅವರು ಸಾರಿಗೆ ಸಚಿವರಾಗಿದ್ದಾಗ ಬೀದರ್-ಉದಗಿರ ಬಸ್‍ಗಳು ಚಿಮ್ಮೆಗಾಂವ್-ಹಂದಿಕೇರಾ ಮಾರ್ಗವಾಗಿ ಸಂಚರಿಸುವಂತೆ ಕ್ರಮ ಕೈಗೊಂಡಿದ್ದರು ಎಂದು ಸ್ಮರಿಸಿಕೊಂಡರು.
ಪ್ರಕಾಶ ಘಾಳೆ ಅವರ ಪ್ರಯತ್ನದಿಂದಾಗಿ ವಿವಿಧ ಗ್ರಾಮಗಳ ಬಸ್ ಸಮಸ್ಯೆ ಬಗೆಹರಿದಿದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ಹೇಳಿದರು.
ಗ್ರಾಮಸ್ಥರು ಬಸ್ ಚಾಲಕ-ನಿರ್ವಾಹಕರನ್ನು ಸತ್ಕರಿಸಿ, ಸಿಹಿ ತಿನ್ನಿಸಿದರು. ಇದಕ್ಕೂ ಮುನ್ನ ಚಿಮ್ಮೆಗಾಂವ್‍ನಲ್ಲೂ ಬಸ್‍ಗೆ ಪೂಜೆ ಸಲ್ಲಿಸಲಾಯಿತು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ರಾಜು ಜಾಧವ್, ತಹಶೀಲ್ದಾರ್ ಅಮೀತ್ ಕುಲಕರ್ಣಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಣಮಂತರಾಯ ಕೌಟಗೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಾ ಸಂತೋಷ್, ಸದಸ್ಯ ಅನಿಲ್ ಬಿರಾದಾರ, ಪ್ರಮುಖರಾದ ಚಂದ್ರಕಾಂತ ಕಾರಬಾರಿ, ನರಸಿಂಗ್ ಬಾಬುರಾವ್ ಪಾಟೀಲ, ತುಕಾರಾಮ ರಾಠೋಡ್ ಮತ್ತಿತರರು ಹಾಜರಿದ್ದರು.