ಕ.ಕ. ಅಭ್ಯರ್ಥಿಗಳಿಗೆ ಶೇ 100 ರಷ್ಟು ಮೀಸಲಿಗೆ ಒತ್ತಡ

Madhyamik Teacher Sangh
Published on

ಬೀದರ್: ಸಂವಿಧಾನದ 371(ಜೆ) ಕಲಂ ತಿದ್ದುಪಡಿ ಕಾಯ್ದೆಯಡಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ ಶೇ 100 ರಷ್ಟು ಮೀಸಲು ಕಲ್ಪಿಸಲು ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಹೇಳಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಕುಂಬಾರವಾಡ ರಸ್ತೆಯಲ್ಲಿನ ಕೆ.ಆರ್.ಇ. ಸಂಸ್ಥೆಯ  ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ‘ಸ್ವಾತಂತ್ರ್ಯ ಹೋರಾಟಗಾರ ವೀರಯ್ಯ ಸ್ವಾಮಿ’ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸದ್ಯ ಕಾಯ್ದೆಯಡಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಶೇ 80 ರಷ್ಟು ಮೀಸಲು ಸೌಲಭ್ಯ ಇದೆ ಎಂದು ತಿಳಿಸಿದರು.

1995 ರ ನಂತರದ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸುವುದು ಸೇರಿದಂತೆ ಶಿಕ್ಷಣ ಸಂಸ್ಥೆಗಳ ಹಾಗೂ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್ವರ ಬಿರಾದಾರ ಮಾತನಾಡಿ, ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಸಂಘ ಸದಾ ಸಿದ್ಧವಿದೆ ಎಂದು ತಿಳಿಸಿದರು.

ಶಿಕ್ಷಕರನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ಸಂಘವು ಬರುವ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಹೇಳಿದರು.

ಪ್ರೊ. ಎಸ್.ಬಿ. ಬಿರಾದಾರ ಮಾತನಾಡಿ, ವೀರಯ್ಯ ಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರ ದೇಶ ಭಕ್ತಿ ಯುವಕರಿಗೆ ಪ್ರೇರಣೆಯಾಗಬೇಕು ಎಂದು ತಿಳಿಸಿದರು.

ಲೇಖಕ ನಾಗಯ್ಯ ಸ್ವಾಮಿ ಅವರು ಬಿಡುಗಡೆಗೊಳಿಸಲಾದ ‘ಸ್ವಾತಂತ್ರ್ಯ ಹೋರಾಟಗಾರ ವೀರಯ್ಯ ಸ್ವಾಮಿ’ ಕೃತಿಯನ್ನು ಪರಿಚಯಿಸಿದರು. ಸಂಘದ ಜಿಲ್ಲಾ ಘಟಕದ ಗೌರವ ಸಲಹೆಗಾರ ಬಸವರಾಜ ಸ್ವಾಮಿ ಹೆಡಗಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅನುದಾನಿತ ಪದವಿಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಪಾಟೀಲ ಹೆಡಗಾಪುರ ಹಾಗೂ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಹೆಡಗಾಪುರದ ಶಿವಲಿಂಗ ಶಿವಾಚಾರ್ಯ, ದಾರುಕಲಿಂಗ ಶಿವಾಚಾರ್ಯ ದಿವ್ಯ ಸಾನಿಧ್ಯ ವಹಿಸಿದ್ದರು.

ಎಚ್.ಕೆ.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ರಜನೀಶ್ ವಾಲಿ, ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ವಿಜಯಕುಮಾರ ಪಾಟೀಲ ಯರನಳ್ಳಿ, ಪ್ರಮುಖರಾದ ರಾಮಕೃಷ್ಣನ್ ಸಾಳೆ, ರಾಜಶೇಖರ ಮಂಗಲಗಿ, ಚಂದ್ರಶೇಖರ ಪಾಟೀಲ, ಸಿದ್ದಮ್ಮ, ನರಸಾರೆಡ್ಡಿ, ಬಳಿರಾಮ ಕುರನಾಳೆ, ಉಮೇಶ ಪಾಟೀಲ, ಸತೀಶ ಬಿರಾದಾರ ಮತ್ತಿತರರು ಇದ್ದರು.

ಸಂಘದ ಜಿಲ್ಲಾ ಘಟಕದ ಖಜಾಂಚಿ ಸಂತೋಷ ಮಂಗಳೂರೆ ಸ್ವಾಗತಿಸಿದರು. ಉಪಾಧ್ಯಕ್ಷ ಲಕ್ಷ್ಮಣ ಪೂಜಾರಿ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಸಂತೋಷ ಸೋಲಪುರೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net