

ಬೀದರ್: ಬೆಂಗಳೂರಿನ ಶಿವಾಜಿನಗರದ ಮೆಟ್ರೋ ರೈಲು ನಿಲ್ದಾಣಕ್ಕೆ ಶಿವಾಜಿ ಮಹಾರಾಜರ ಹೆಸರಿಡಬೇಕು ಎಂದು ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಪರಿಷತ್ ಪದಾಧಿಕಾರಿಗಳು ವಿಧಾನ ಪರಿಷತ್ ಸದಸ್ಯ ಡಾ. ಎಂ.ಜಿ. ಮುಳೆ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಿಯೋಗದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
17ನೇ ಶತಮಾನದಲ್ಲಿ ಶಿವಾಜಿ ಮಹಾರಾಜರು ತಮ್ಮ ಬಾಲ್ಯವನ್ನು ಬೆಂಗಳೂರಿನ ಶಿವಾಜಿ ನಗರದಲ್ಲಿ ಕಳೆದಿದ್ದರು. ಹೀಗಾಗಿ ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಈ ಪ್ರದೇಶಕ್ಕೆ ಶಿವಾಜಿನಗರ ಎಂದು ನಾಮಕರಣ ಮಾಡಲಾಯಿತು ಎಂದು ಗಮನ ಸೆಳೆದರು.
ಶಿವಾಜಿನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಮರಾಠಿಗರು ವಾಸವಾಗಿದ್ದಾರೆ. ಪ್ರದೇಶದ ಹೆಸರೇ ಶಿವಾಜಿನಗರ ಇರುವುದರಿಂದ ಮೆಟೋ ನಿಲ್ದಾಣಕ್ಕೂ ಶಿವಾಜಿ ಮಹಾರಾಜರ ಹೆಸರನ್ನೇ ಇಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ರಾಜ್ಯ ಅಧ್ಯಕ್ಷ ಸುರೇಶ ಸಾಠೆ, ಖಜಾಂಚಿ ವೆಂಕಟರಾವ್ ಚೌಹಾಣ್, ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ದಿಗಂಬರರಾವ್ ಮಾನಕಾರಿ, ರಾಯಚೂರು ಜಿಲ್ಲಾ ಅಧ್ಯಕ್ಷ ನಾಗೋಜಿರಾವ್ ಬಾಗೋಡೆ, ಕರ್ನಾಟಕ ಮರಾಠ ಕ್ರಾಂತಿ ಮೋರ್ಚಾ ಬೀದರ್ ಜಿಲ್ಲಾ ಘಟಕದ ಸಂಯೋಜಕ ವೆಂಕಟರಾವ್ ಮಾಯಿಂದೆ, ರೋಹಿತ್ ಸಾಠೆ, ಶಾಹುರಾಜ್ ಪವಾರ್ ಮತ್ತಿತರ ಮರಾಠ ಮುಖಂಡರು ಇದ್ದರು.