

ಬೀದರ್: ರೇಬಿಸ್‍ನಿಂದ ದೇಶದಲ್ಲಿ ಪ್ರತಿ ವರ್ಷ 20,562 ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ. ಸಮುದ್ರ ಕುಲಕರ್ಣಿ ಹೇಳಿದರು.
ನಗರದ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ರೇಬಿಸ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಾರ್ಷಿಕ ಸಾವುಗಳಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಸಂಖ್ಯೆ ಶೇ 40 ರಷ್ಟಿದೆ ಎಂದು ತಿಳಿಸಿದರು.
ದೇಶದಲ್ಲಿ ನಾಯಿ ಕಡಿತವೇ ರೇಬಿಸ್‍ಗೆ ಪ್ರಮುಖ ಕಾರಣವಾಗಿದೆ. ಮಾರಣಾಂತಿಕ ರೇಬಿಸ್ ವೈರಸ್ ಮನುಷ್ಯನ ಮೆದುಳು ಹಾಗೂ ನರ ಮಂಡಲಕ್ಕೆ ಹಾನಿ ಉಂಟು ಮಾಡುತ್ತದೆ ಎಂದು ಹೇಳಿದರು.
ನಾಯಿ ಸೇರಿದಂತೆ ಸೋಂಕಿತ ಪ್ರಾಣಿ ಕಚ್ಚುವುದು, ಜೊಲ್ಲು/ಉಗುಳಿನ ಸಂಪರ್ಕದಿಂದ ರೇಬಿಸ್ ಹರಡುತ್ತದೆ. ಪ್ರಾಣಿಗಳಲ್ಲಿ ಅಸಾಮಾನ್ಯ ಆಕ್ರಮಣಶೀಲತೆ, ಹೆದರಿಕೆ, ಅತಿಯಾಗಿ ಜೊಲ್ಲು ಸೋರುವಿಕೆ, ನುಂಗಲು ತೊಂದರೆ, ನೀರು ನೋಡಿ ಹೆದರುವುದು, ಅಂಗವೈಕಲ್ಯ ರೋಗದ ಲಕ್ಷಣಗಳಾಗಿವೆ ಎಂದು ತಿಳಿಸಿದರು.
ರೇಬಿಸ್ ತಡೆಗಟ್ಟಲು ಸಾಕುಪ್ರಾಣಿಗಳಿಗೆ ನಿಯಮಿತವಾಗಿ ಲಸಿಕೆ ನೀಡಬೇಕು. ಅಲೆದಾಡುವ/ ಕಾಡುಪ್ರಾಣಿಗಳ ಸಂಪರ್ಕ ತಪ್ಪಿಸಬೇಕು. ಪ್ರಾಣಿಗಳ ಅನುಮಾನಾಸ್ಪದ ವರ್ತನೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಪ್ರಾಣಿ ಕಚ್ಚಿದರೆ ಅಥವಾ ಪರಚಿದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು ಎಂದು ಹೇಳಿದರು.
ಕಾಲೇಜಿನ ನಿರ್ದೇಶಕ ಆರ್.ಡಿ. ಸಿಂಗ್, ಪಾಚಾರ್ಯೆ ಡಾ. ವೀಣಾ ಸೋರಗಾವಿ, ಡಾ. ಯೋಗೇಂದ್ರ ಕುಲಕರ್ಣಿ, ಡಾ. ವಿಕ್ರಮ ಚಾಕೋತೆ ಉಪಸ್ಥಿತರಿದ್ದರು.