ಖಾಸಗಿ ಶಿಕ್ಷಣ ಸಂಸ್ಥೆಗಳ ಬೇಡಿಕೆ ಈಡೇರಿಕೆಗೆ ಆಗ್ರಹ

Private Education Society Sangh Meet CM - Copy
Published on

ಬೀದರ್: ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಎಂಟು ಪ್ರಮುಖ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಅಖಿಲ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಸಂಘದ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಮಂಗಳವಾರ ನಿಯೋಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.

ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಾಲ್ಗೊಳ್ಳಲು ಕಲಬುರಗಿಗೆ ಬರುವ ಮುನ್ನ ಬೇಡಿಕೆಗಳ ಈಡೇರಿಕೆ ಸಂಬಂಧ ಘೋಷಣೆ ಮಾಡಬೇಕು ಎಂದು ಸಂಘದ ರಾಜ್ಯ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಒತ್ತಾಯಿಸಿದರು.

1995 ರ ನಂತರ ಆರಂಭಿಸಲಾದ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಖಾಸಗಿ ಶಾಲೆಗಳಲ್ಲಿ ಆರ್‍ಟಿಇ ಮರು ಜಾರಿಗೊಳಿಸಬೇಕು. ಅನುದಾನಿತ ಶಾಲೆ, ಕಾಲೇಜುಗಳ ಖಾಲಿ ಹುದ್ದೆ ಭರ್ತಿ ಮಾಡಬೇಕು. ಖಾಸಗಿ ಅನುದಾನ ರಹಿತ ಶಾಲೆ, ಕಾಲೇಜು ಕಟ್ಟಡಗಳಿಗೆ ಕರ ವಿನಾಯಿತಿ ನೀಡಬೇಕು. ಉಚಿತ ವಿದ್ಯುತ್ ಒದಗಿಸಬೇಕು. ಕನ್ನಡ ಶಾಲೆ ಬಂದ್ ಮಾಡಿ ಕರ್ನಾಟಕ ಪಬ್ಲಿಕ್ ಶಾಲೆ ಹೆಸರಲ್ಲಿ ಆಂಗ್ಲ ಮಾಧ್ಯಮ ಶಾಲೆ ತೆರೆಯುವುದನ್ನು ಕೈಬಿಡಬೇಕು. ಕನ್ನಡ ಮಾಧ್ಯಮ ಶಾಲೆ, ಕಾಲೇಜುಗಳ ನವೀಕರಣ ಪ್ರಕ್ರಿಯೆ ಸರಳೀಕರಿಸಬೇಕು. ಕಲ್ಯಾಣ ಕರ್ನಾಟಕ ಭಾಗದ ಖಾಸಗಿ ಅನುದಾನ ರಹಿತ ಶಾಲೆ, ಕಾಲೇಜುಗಳಿಗೆ ಸಂವಿಧಾನದ 371(ಜೆ) ತಿದ್ದುಪಡಿ ಕಾಯ್ದೆ ಅನ್ವಯ ಸೌಲಭ್ಯ ಕಲ್ಪಿಸಬೇಕು ಎನ್ನುವುದು ಪ್ರಮುಖ ಸಂಘದ ಪ್ರಮುಖ ಬೇಡಿಕೆಗಳಾಗಿವೆ ಎಂದು ಹೇಳಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಎಂ. ಮೌಲಾಲಿ, ಕಾರ್ಯದರ್ಶಿ ಕೆ. ಗುರುನಾಥ ರೆಡ್ಡಿ, ಕಲಬುರಗಿ ವಿಭಾಗ ಪ್ರಮುಖ ಮಹಾಲಿಂಗಗೌಡ, ಬಸವಕಲ್ಯಾಣ ತಾಲ್ಲೂಕು ಘಟಕದ ಅಧ್ಯಕ್ಷ ಧನರಾಜ ದೊಡ್ಡಮನಿ ನಿಯೋಗದಲ್ಲಿ ಇದ್ದರು.

ಇದಕ್ಕೂ ಮುನ್ನ ನಿಯೋಗವು ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ, ಶಶೀಲ್ ನಮೋಶಿ, ಪುಟ್ಟಣ್ಣ ಹಾಗೂ ಹನುಮಂತ ನಿರಾಣಿ ಅವರನ್ನು ಭೇಟಿ ಮಾಡಿ ಸಂಘದ ಬೇಡಿಕೆ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಮನವಿ ಮಾಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net