

ಬೀದರ್: ವಿವೇಕಾನಂದ ಆರೋಗ್ಯಧಾಮ ಸೆ.11ರಂದು ನಗರದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಜ್ಯೋತಿರ್ಮಯಾನಂದ ಹೇಳಿದರು.
ಆಶ್ರಮ 21 ವರ್ಷಗಳಿಂದ ನಿರಂತರ ವ್ಯಕ್ತಿ ಜತೆಗೆ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ಭಾಗದ ಜನರ ಆರೋಗ್ಯ ಭಾಗ್ಯ ಕಲ್ಪಿಸಲು ನಮ್ಮ ಹೊಸ ಪ್ರಯತ್ನ ಆರೋಗ್ಯಧಾಮ ಆಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿವನಗರದ ಆಶ್ರಮದಲ್ಲಿ ಅಂದು ಬೆಳಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ಸ್ವಾಮಿ ಅಭಿಯಾನಂದಜಿ ಸೇರಿ ಜನಪ್ರತಿನಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಆರೋಗ್ಯಧಾಮ ನಮ್ಮ ಪ್ರಾಚೀನ ನಾಲ್ಕು ಚಿಕಿತ್ಸಾ ವಿಧಾನಗಳನ್ನು ಒಳಗೊಂಡಿದೆ. ಇದರಲ್ಲಿ ಆಯುರ್ವೇದ, ಪ್ರಾಕೃತಿಕ ಚಿಕಿತ್ಸೆ, ಯೋಗ ಮತ್ತು ಧ್ಯಾನ. ಆರೋಗ್ಯ ಭಾಗ್ಯಕ್ಕೆ ಈ ನಾಲ್ಕು ಆಧಾರಸ್ತಂಭವಾಗಿವೆ. ನಮ್ಮದು ಹಣ ಗಳಿಕೆ, ವ್ಯವಹಾರ ದೃಷ್ಟಿಯಿಂದ ಮಾಡುತ್ತಿರುವ ಕೇಂದ್ರವಲ್ಲ. ಜನಾರೋಗ್ಯ ಕಾಳಜಿಯೇ ಮುಖ್ಯ ಅಜೆಂಡಾ ಎಂದರು.
ಆರೋಗ್ಯ ಧಾಮದಿಂದ ಉಚಿತ ತರಬೇತಿ, ಜನಜಾಗೃತಿ ಜತೆಗೆ ಶಾಲಾ-ಕಾಲೇಜು, ವಿಶ್ವವಿದ್ಯಾಲಯ ಕ್ಯಾಂಪಸ್ ಸೇರಿ ವಿವಿಧೆಡೆ ತೆರಳಿ ಪರಿಣತರಿಂದ ಉಪನ್ಯಾಸ, ವಿಚಾರ ಸಂಕಿರಣ, ಉಚಿತ ಆರೋಗ್ಯ ಶಿಬಿರದಂತಹ ಚಟುವಟಿಕೆ ನಡೆಸಲಾಗುವುದು ಎಂದು ತಿಳಿಸಿದರು.
ಆಸ್ಪತ್ರೆ ಸಿಇಒ ಜಗದೀಶ ಮುಖೇಡಕರ್, ಪ್ರಮುಖರಾದ ಸದಾನಂದ ಜೋಶಿ, ಜೈಪ್ರಕಾಶ ಪೋದ್ದಾರ, ವಿರೂಪಾಕ್ಷ ಗಾದಗಿ ಇದ್ದರು.