

ಬೀದರ್: ಜಿಲ್ಲಾದ್ಯಂತ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ 79,300 ಹೆಕ್ಟೇರ್ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಯ್ಯಾ ಸ್ವಾಮಿ ಹೇಳಿದರು.
ಕಮಲನಗರ ತಾಲೂಕಿನ ಖೇಡ, ಸಂಗಮ, ಬಳತ್, ಭಾಲ್ಕಿ ತಾಲೂಕಿನ ಅಂಬೇಸಾಂಗವಿ, ಹುಪಳಾ ಗ್ರಾಮಗಳಿಗೆ ಭೇಟಿ ನೀಡಿ ಮಳೆ ಹಾನಿ ವೀಕ್ಷಿಸಿ ಮಾತನಾಡಿದ ಅವರು, ಬೆಳೆ ನಷ್ಟ ಸಮೀಕ್ಷೆಯನ್ನು ಕಂದಾಯ, ಕೃಷಿ ಅಧಿಕಾರಿಗಳು ಜಂಟಿಯಾಗಿ ಮಾಡುತ್ತಿದ್ದಾರೆ ಎಂದರು.
ಕಾರಂಜಾ ಜತೆಗೆ ಮಹಾರಾಷ್ಟ್ರದ ಧನೆಗಾಂವ ಜಲಾಶಯ ಹಾಗೂ ತೆಲಗಾಣದ ಕೊತ್ತೂರ ಬ್ಯಾಬೇಜ್ ನಿಂದ ನೀರು ಬಿಟ್ಟಿದ್ದರಿಂದ ನದಿ ಬಳಿಯ ಹೊಲಗಳಿಗೆ ನೀರು ನುಗ್ಗಿ ಬೆಳೆ ಸಂಪೂರ್ಣ ಹಾಳಾಗಿದೆ. ಸಮೀಕ್ಷೆ ವರದಿಯು ಸರ್ಕಾರಕ್ಕೆ ಸಲ್ಲಿಸಿದ ನಂತರ ಹೆಕ್ಟೇರ್ಗೆ 8500 ರೂ. ಬೆಳೆ ಪರಿಹಾರ ಸಿಗಲಿದೆ. ವಿಮೆ ಮಾಡಿಸಿದ ರೈತರು ಸಹಾಯವಾಣಿಗೆ ಕರೆ ಮಾಡಿ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ದೂರು ಸಲ್ಲಿಸಬೇಕು. ಧಾರಾಕಾರ ಮಳೆಯಿಂದ ನಂದಿ ಬಿಜಲಗಾಂವ ಗ್ರಾಮದ ಸುಮಾರು 40 ಜಾನುವಾರುಗಳು ನೀರುಪಾಲಾಗಿದ್ದು, ಸಂಬಂಧಿಸಿದ ಮಾಲೀಕರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಕೋರಿದರು.
ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ವಿಶ್ವನಾಥ ಪಾಟೀಲ್ ಮಾಡಗೋಳ, ಜಿಲ್ಲಾ ಪ್ರತಿನಿಧಿ ದಯಾನಂದ ಸ್ವಾಮಿ, ಭಾಲ್ಕಿ ತಾಲೂಕು ಅಧ್ಯಕ್ಷ ರಮೇಶ ಪಾಟೀಲ್, ಜಂಟಿ ಕೃಷಿ ನಿದರ್ೇಶಕಿ ದೇವಿಕಾ ಆರ್., ಉಪ ಕೃಷಿ ನಿರ್ದೇಶಕ ಅನ್ಸಾರಿ ಎಂ.ಕೆ. ಇತರರಿದ್ದರು.