

ಬೀದರ್: ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಬಹಳಷ್ಟು ಬೆಳೆ ಹಾನಿಯಾಗಿದೆ. ವಾರದೊಳಗೆ ಪರಿಹಾರ ಕೊಡದಿದ್ದರೆ ರೈತರೊಂದಿಗೆ ಜಿಲ್ಲಾಕಾರಿ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡುವುದಾಗಿ ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್ ಹೇಳಿದರು.
ಹೆಸರು, ಉದ್ದು, ಸೋಯಾಬೀನ್, ತೊಗರಿ ಸೇರಿ ವಿವಿಧ ಬೆಳೆಗಳು ಮಳೆಯಿಂದ ಹಾನಿಯಾಗಿದ್ದು, ಎಕರೆಗೆ 50 ಸಾವಿರ ರೂ. ಸರ್ಕಾರ ಪರಿಹಾರ ಕೊಡಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಮಳೆಯಿಂದ ಇಸ್ಲಾಂಪುರ ಗ್ರಾಮ ಸಂಪೂರ್ಣ ಮುಳುಗಡೆಯಾಗಿದೆ. ಹೊಲಗಳು ರೈತರು ಗುರುತು ಹಿಡಿಯದಷ್ಟು ಮುಳುಗಿವೆ. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಮತ್ತೆ ಸಾಲ ಮಾಡಿ ಹಾಳಾದ ಬೆಳೆಯನ್ನು ಕೀಳುವ ಸ್ಥಿತಿ ಬಂದಿದೆ. ಸಾಂಗ್ವಿ, ಬಂಪಳ್ಳಿ, ಜಾಂಪಾಡ, ಚಿಮಕೋಡ, ನೆಮತಾಬಾದ್ ಹೀಗೆ ಹಲವು ಗ್ರಾಮಗಳಲ್ಲಿ ಬಹುತೇಕ ಬೆಳೆಗಳು ಹಾಳಾಗಿದ್ದು, ಕಾಟಾಚಾರಕ್ಕೆ ಪೌರಾಡಳಿತ ಸಚಿವ ರಹೀಮ್ ಖಾನ್ ರಸ್ತೆ ಮೂಲಕವೇ ಕಣ್ಣಾಡಿಸಿ ಹೋಗಿದ್ದಾರೆ ಎಂದು ಕಿಡಿಕಾರಿದರು.
ಮಾಂಜ್ರಾ ನದಿ ದಡದಲ್ಲಿರುವ ಚಿಮಕೋಡ, ಅಲ್ಲಾಪುರ ಗ್ರಾಮದ ಜಮೀನು ಜಲಾವೃತಗೊಂಡಿವೆ. ಚಾಂಬಾಳ, ಹಿಪ್ಪಳಗಾಂವ ಮತ್ತು ಕನ್ನಳ್ಳಿಯಲ್ಲಿನ ಹೊಲದಲ್ಲಿ ನೀರು ನಿಂತು ಬೆಳೆಗಳು ಕೊಳೆತಿವೆ. ಬಹಳಷ್ಟು ಹಳ್ಳಿಗಳಲ್ಲಿ ಮನೆ ಹಾಗೂ ಸರ್ಕಾರಿ ಶಾಲೆ, ಅಂಗನವಾಡಿಗಳು ಕುಸಿದಿವೆ. ಅಧಿಕಾರಿಗಳನ್ನು ಕೇಳಿದರೆ ರಿಪೇರಿಗಾಗಿ ಅನುದಾನ ಮೀಸಲಿಟ್ಟಿದ್ದೇವೆ ಎನ್ನುತ್ತಾರೆ. ಆದರೆ ಇಂದಿಗೂ ಕಾಮಗಾರಿ ಆರಂಭವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಬೆಳೆ ಹಾನಿ ಕುರಿತ ಸಮಗ್ರ ವರದಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಲ್ಲಿಸಲಾಗಿದೆ. ಬಿತ್ತನೆಗಾಗಿ ರೈತರು ಎಕರೆಗೆ 25 ಸಾವಿರ ರೂ. ಖರ್ಚು ಮಾಡಿದ್ದಾರೆ. ಸರ್ಕಾರ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು. ನಿರ್ಲಕ್ಷ್ಯ ಮಾಡಿದರೆ ಡಿಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದರು.
ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ವಿವಿಧ ವಸ್ತುಗಳ ಮೇಲಿನ ಜಿಎಸ್ಟಿ ತೆರಿಗೆ ಕಡಿಮೆ ಮಾಡಿದ ಕೇಂದ್ರ ಸರ್ಕಾರದ ನಡೆಯನ್ನು ಸ್ವಾಗತಿಸುತ್ತೇವೆ. ಇದು ಬಡವರು, ಮಧ್ಯಮ ವರ್ಗದವರಿಗೆ ಕೇಂದ್ರ ದಸರಾ ಕೊಡುಗೆ ನೀಡಿದೆ ಎಂದರು.
ಬಿಜೆಪಿ ಮಂಡಲ ಗ್ರಾಮೀಣ ಅಧ್ಯಕ್ಷ ದೀಪಕ್ ಗಾದಗೆ ಮಾತನಾಡಿದರು. ಪಕ್ಷದ ನಗರ ಘಟಕ ಅಧ್ಯಕ್ಷ ಶಶಿಧರ ಹೊಸಳ್ಳಿ, ಪ್ರಮುಖರಾದ ರಾಜೇಂದ್ರ ಪೂಜಾರಿ, ನಿಜಲಿಂಗಪ್ಪ, ನಾಗೇಂದ್ರ ಪಾಟೀಲ್ ಇತರರಿದ್ದರು.