

ಬೀದರ್: ಜೀವನದಲ್ಲಿ ಶಾಂತಿ, ನೆಮ್ಮದಿಗೆ ನಿತ್ಯ ಇಷ್ಟಲಿಂಗ ಪೂಜೆ ಮಾಡಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಹಿರಿಯ ಉಪಾಧ್ಯಕ್ಷ ಬಸವರಾಜ ಬುಳ್ಳಾ ಹೇಳಿದರು.
ನಗರದ ಜ್ಞಾನಸುಧಾ ವಿದ್ಯಾಲಯ ಸಮೀಪದ ಬಸವ ಮಂಟಪದಲ್ಲಿ ಭಾನುವಾರ ನಡೆದ ಶರಣರ ದರ್ಶನ ಪ್ರವಚನ ಸಮಾರೋಪ ಸಮಾರಂಭದಲ್ಲಿ ಷಟ್‍ಸ್ಥಲ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಲಿಂಗವಂತರು ಏಕದೇವೋಪಾಸಕರಾಗಬೇಕು. ಶರಣ ಸತಿ, ಲಿಂಗ ಪತಿ ತತ್ವವನ್ನು ಪಾಲಿಸಬೇಕು ಎಂದು ತಿಳಿಸಿದರು.
ಪ್ರವಚನ ನಡೆಸಿಕೊಟ್ಟ ರಾಷ್ಟ್ರೀಯ ಬಸವ ದಳದ ಕ್ರಿಯಾ ಮೂರ್ತಿ ಸುರೇಶ ಸ್ವಾಮಿ ಮಾತನಾಡಿ, ವಚನಗಳನ್ನು ಎಲ್ಲರೂ ಅಧ್ಯಯನ ಮಾಡಬೇಕು. ಅವುಗಳ ಸಂದೇಶ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಬಸವಾದಿ ಶರಣರ ವಚನಗಳು ಜೀವನ ಸಾರವನ್ನು ಒಳಗೊಂಡಿವೆ. ಅನೇಕ ಶರಣರು ತ್ಯಾಗ, ಬಲಿದಾನದ ಮೂಲಕ ಅವುಗಳನ್ನು ಸಂರಕ್ಷಿಸಿದ್ದಾರೆ. ವಚನಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮೂಲಕ ಅವರ ತ್ಯಾಗ, ಬಲಿದಾನವನ್ನು ಗೌರವಿಸಬೇಕಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಅಧ್ಯಕ್ಷತೆ ವಹಿಸಿದ್ದರು. ರೇಣುಕಾ ಓಂಕಾರ ಕುಂಚಗೆ ದಂಪತಿ ಗುರು ಪೂಜೆ ನೆರವೇರಿಸಿದರು.
ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ, ಉದ್ಯಮಿ ಚಂದ್ರಶೇಖರ ಹೆಬ್ಬಾಳೆ, ಡಾ. ಚನ್ನಬಸವ ಪಟ್ಟದ್ದೇವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೈರಾಜ ಖಂಡ್ರೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ರಾಷ್ಟ್ರೀಯ ಬಸವ ದಳದ ಬೀದರ್ ನಗರ ಘಟಕದ ಅಧ್ಯಕ್ಷ ವಿವೇಕಾನಂದ ಧನ್ನೂರ, ಬೀದರ್ ತಾಲ್ಲೂಕು ಅಧ್ಯಕ್ಷ ಸಂಜುಕುಮಾರ ಪಾಟೀಲ, ವಿಲಾಸ್ ಪಾಟೀಲ, ನೆಹರೂ ಸ್ವಾಮಿ, ರಮೇಶ ಪಾಟೀಲ ಚಿಕ್ಕಪೇಟ್, ಮಹೇಶ ಬಿರಾದಾರ ಉಪಸ್ಥಿತರಿದ್ದರು.
ಕೆ.ಕೆ. ಕಲ್ಯಾಣ ಮಂಟಪದ ಮಾಲೀಕ ಕಂಟೆಪ್ಪ ಗಂದಿಗುಡೆ, ಸಂಗೀತ ಶಿಕ್ಷಕ ಏಕನಾಥ ಸಿದ್ಧೇಶ್ವರೆ ವಚನ ಸಂಗೀತ ನಡೆಸಿಕೊಟ್ಟರು. ಸುನೀಲ್ ಗಂದಿಗುಡೆ ಸ್ವಾಗತಿಸಿದರು. ಗಂಗಶೆಟ್ಟಿ ಪಾಟೀಲ ನಿರೂಪಿಸಿದರು. ವಿಜಯಕುಮಾರ ಬಾಬಣೆ ವಂದಿಸಿದರು.