

ಬೀದರ್: ನಗರದ ಅಂಗಡಿ ಮುಂಗಟ್ಟುಗಳ ನಾಮಫಲಕಗಳ ಮೇಲ್ಭಾಗದ ಶೇ 60 ರಷ್ಟು ಸ್ಥಳದಲ್ಲಿ ಕನ್ನಡ ಬಳಕೆ ಆದೇಶ ಪಾಲನೆಗೆ ಕ್ರಮ ಕೈಗೊಳ್ಳಬೇಕು ಎಂದು ನಮ್ಮ ಕರ್ನಾಟಕ ಸೇನೆ ಒತ್ತಾಯಿಸಿದೆ.
ಸೇನೆಯ ಪದಾಧಿಕಾರಿಗಳು ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಅವರ ನೇತೃತ್ವದಲ್ಲಿ ನಗರದಲ್ಲಿ ಪೌರಾಯುಕ್ತ ಶಿವರಾಜ ರಾಠೋಡ್ ಅವರಿಗೆ ಈ ಕುರುತು ಮನವಿ ಪತ್ರ ಸಲ್ಲಿಸಿದರು.
ನಾಮಫಲಕಗಳ ಶೇ 60 ರಷ್ಟು ಭಾಗದಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2024ರ ಆಗಸ್ಟ್ 22 ರಂದು ಆದೇಶ ಹೊರಡಿಸಿದೆ. ಆದರೆ, ಬೀದರ್‍ನಲ್ಲಿ ಆದೇಶ ಪಾಲನೆ ಆಗುತ್ತಿಲ್ಲ. ನಗರಸಭೆ ಕಚೇರಿ ನಾಮಫಲಕದಲ್ಲಿ ಅನ್ಯ ಭಾಷೆಯನ್ನೂ ಬಳಸಲಾಗಿದೆ ಎಂದು ದೂರಿದರು.
ಸರ್ಕಾರದ ಆದೇಶ ಪಾಲನೆಗೆ ಕ್ರಮ ಕೈಗೊಳ್ಳದಿದ್ದಲ್ಲಿ ಬರುವ ದಿನಗಳಲ್ಲಿ
ಕನ್ನಡ ಬಳಸದ ಕಚೇರಿ, ಖಾಸಗಿ ಆಸ್ಪತ್ರೆ, ಮಳಿಗೆ, ಅಂಗಡಿ ಮುಂಗಟ್ಟುಗಳ ನಾಮಫಲಕಗಳಿಗೆ ಕಪ್ಪು ಮಸಿ ಬಳಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರ ಸೌಂದರ್ಯ ವೃದ್ಧಿಗೆ ಆಕರ್ಷಕ ಕಂಬಗಳನ್ನು ಅಳವಡಿಸಿ, ಬೀದಿ ದೀಪ ಹಾಕಲಾಗಿದೆ. ಆದರೆ, ಕಾರ್ಯಕ್ರಮಗಳ ಬ್ಯಾನರ್‍ಗಳು ಕಂಬಗಳ ಅಂದಗೆಡಿಸುತ್ತಿವೆ ಎಂದು ಆಪಾದಿಸಿದರು.
ಬೀದಿ ದೀಪ ಕಂಬಕ್ಕೆ ಬ್ಯಾನರ್‍ಗಳು ಅಳವಡಿಸದಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಅಂತಹ ಬ್ಯಾನರ್‍ಗಳನ್ನು ಹರಿದು ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ವೇದಿಕೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಶಶಿಕಾಂತ್ ಅಷ್ಟೂರೆ, ಪ್ರಧಾನ ಕಾರ್ಯದರ್ಶಿ ಸಂಜು ಯಾದವ್, ಪ್ರಧಾನ ಸಂಚಾಲಕ ಸುಧಾಕರ್ ರಾಠೋಡ್, ಅನಿಲ್ ರಾಜಗೀರಾ, ಸಂತೋಷ್ ಮಳಚಾಪುರೆ, ಸಂತೋಷ್ ಪಾಟೀಲ, ರವಿ ಪಾಟೀಲ, ಸಾಯಿ ಕಿರಣ್, ಬಸ್ಸು ದಾನಿ, ರಾಜಕುಮಾರ ಸ್ವಾಮಿ, ಕರಣ್ ತವರ್, ಅಪ್ಪು ಸ್ವಾಮಿ ಮತ್ತಿತರರು ಇದ್ದರು.