

ಬೀದರ್: ಬಸವ ಸಂಸ್ಕೃತಿ ಅಭಿಯಾನ ಅಂಗವಾಗಿ ಅಭಿಯಾನ ಸಮಿತಿಯು ಇಲ್ಲಿಯ ಐಎಂಎ ಹಾಲ್‍ನಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಸಂಸ್ಕೃತಿ ಆಧಾರಿತ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಬಸವ ಸಂಸ್ಕೃತಿ ಅನಾವರಣಗೊಂಡಿತು.
ಬಸವಾದಿ ಶರಣರ ಚಿತ್ರ, ಕಲ್ಯಾಣ ಕ್ರಾಂತಿ, ವಚನ ಸಾಹಿತ್ಯ ಇತ್ಯಾದಿಗಳು ಚಿತ್ರಕಲೆಯಲ್ಲಿ ಅರಳಿದವು.
ವಿದ್ಯಾರ್ಥಿಗಳು 12ನೇ ಶತಮಾನದಲ್ಲಿ ಸಮಾನತೆಗಾಗಿ ನಡೆದಿದ್ದ ಕಲ್ಯಾಣ ಕ್ರಾಂತಿ, ಶರಣರು ರಚಿಸಿದ ವಚನ ಸಾಹಿತ್ಯ, ಬಸವಣ್ಣ, ಅಲ್ಲಮಪ್ರಭು, ಅಕ್ಕ ಮಹಾದೇವಿ ಮೊದಲಾದವರ ಚಿತ್ತಾಕರ್ಷಕ ಚಿತ್ರಗಳನ್ನು ಬಿಡಿಸಿದರು.
5 ರಿಂದ 10ನೇ ತರಗತಿ ಹಾಗೂ ಪಿಯುಸಿಯಿಂದ ಪದವಿವರೆಗೆ ಎರಡು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆದವು. ಜಿಲ್ಲೆಯ ವಿವಿಧೆಡೆಯ 150 ಸ್ಪರ್ಧಾಳುಗಳು ತಮ್ಮ ಕಲ್ಪನೆಯ ಬಸವ ಸಂಸ್ಕೃತಿಗೆ ಚಿತ್ರದ ಸ್ವರೂಪ ನೀಡಿದರು.
ಪ್ರತ್ಯೇಕ ವಿಭಾಗಗಳ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ನಗರದ ಬಿ.ವಿ. ಭೂಮರಡ್ಡಿ ಕಾಲೇಜಿನಲ್ಲಿ ಸೆ. 3 ರಂದು ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನದ ಪ್ರಧಾನ ಸಮಾರಂಭದಲ್ಲಿ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು ಎಂದು ಬೀದರ್ ಬಸವ ಸಂಸ್ಕೃತಿ ಅಭಿಯಾನ ಸಮಿತಿಯ ಅಧ್ಯಕ್ಷ ಬಸವರಾಜ ಧನ್ನೂರ ಪ್ರಕಟಿಸಿದರು.
ಖ್ಯಾತ ಚಿತ್ರ ಕಲಾವಿದರಾದ ಸಿ.ಬಿ. ಸೋಮಶೆಟ್ಟಿ, ಶ್ರೀಕಾಂತ ಬಿರಾದಾರ, ಬಡಿಗೇರ ತೀರ್ಪುಗಾರರಾಗಿದ್ದರು. ಯೋಗೀಶ್ ಚಿತ್ರಕಲಾ ಕಾಲೇಜಿನ ಯೋಗೀಶ್ ಮಠದ, ರೇವಣಕುಮಾರ ಸೋಮಶೆಟ್ಟಿ, ರಾಜಕುಮಾರ ಶಂಭು, ಸ್ಫೂರ್ತಿ ಧನ್ನೂರ, ಜಗದೀಶ್ ಪಾಟೀಲ, ರಾಜಕುಮಾರ ಕಮಠಾಣೆ, ಯೋಗೀಶ್ ಸಿರಿಗಿರೆ, ವೀರಶೆಟ್ಟಿ ಪಾಟೀಲ ಮರಕಲ್, ಅರವಿಂದ ಕಾರಬಾರಿ ಮತ್ತಿತರರು ಇದ್ದರು.