

ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಇಲ್ಲಿಯ ಶ್ರೀ ಸ್ವಾಮಿ ಸಮರ್ಥ ಫಂಕ್ಷನ್ ಹಾಲ್‍ನಲ್ಲಿ ಭಾನುವಾರ ನಡೆದ ಪರಿಸರ ಸ್ನೇಹಿ ಗಣೇಶ ತಯಾರಿಕೆ ಕಾರ್ಯಾಗಾರದಲ್ಲಿ ಮಕ್ಕಳ ಕೈಯಲ್ಲಿ ಅಂದದ ಮಣ್ಣಿನ ಗಣಪನ ಮೂರ್ತಿಗಳು ಅರಳಿದವು.
ಮಕ್ಕಳು ಬೇರೆ ಬೇರೆ ಗಾತ್ರ ಹಾಗೂ ವಿನ್ಯಾಸದ ವಿಘ್ನ ನಿವಾರಕನ ಮೂರ್ತಿಗಳನ್ನು ತಯಾರಿಸಿ ಗಮನ ಸೆಳೆದರು.
ಕ್ಲಬ್‍ನವರು ಮಕ್ಕಳಿಗೆ ಮೂರ್ತಿ ತಯಾರಿಕೆಗೆ ಜೇಡಿ ಮಣ್ಣು ಹಾಗೂ ಇತರ ಅಗತ್ಯ ಸಾಮಗ್ರಿ ನೀಡಿದರು. ಯೋಗೀಶ್ ಫೈನ್ ಆರ್ಟ್ ಕಾಲೇಜಿನ ಯೋಗೀಶ್ ಮಠದ ಮೂರ್ತಿ ತಯಾರಿಕೆ ವಿಧಾನ ಹೇಳಿಕೊಟ್ಟರು. ಪಾಲಕರು ಮಕ್ಕಳನ್ನು ಹುರಿದುಂಬಿಸಿದರು.
ಪಿಒಪಿ ಗಣೇಶ ಮೂರ್ತಿಗಳು ಪರಿಸರಕ್ಕೆ ಹಾನಿಕಾರಕವಾಗಿವೆ. ಹೀಗಾಗಿ ಮಣ್ಣಿನ ಗಣೇಶ ಮೂರ್ತಿ ತಯಾರಿಕೆ ಹಾಗೂ ಪ್ರತಿಷ್ಠಾಪನೆಗೆ ಉತ್ತೇಜನ ನೀಡಲು ಪರಿಸರ ಸ್ನೇಹಿ ಗಣೇಶ ತಯಾರಿಕೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ಡಾ. ನಾಗೇಶ ಪಾಟೀಲ ತಿಳಿಸಿದರು.
ಕಾರ್ಯಾಗಾರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಶ್ರೀ ಸಮರ್ಥ ರಾಮದಾಸ ಸೇವಾ ಟ್ರಸ್ಟ್ ಅಧ್ಯಕ್ಷ ಕಮಲ್ ಕಿಶೋರ ಅಟ್ಟಲ್, ಕಾರ್ಯದರ್ಶಿ ವಸಂತ ಪಟೇಲ್, ಆರ್.ಎಸ್.ಎಸ್.ನ ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿಯ ಪ್ರಮುಖ ಮನೋಹರ ಮಠದ, ಏಕಲ್ ಗ್ರಾಮೋತ್ಥಾನ ಅಭಿಯಾನದ ಅಧ್ಯಕ್ಷ ರಾಜಕುಮಾರ ಅಗ್ರವಾಲ್, ಕ್ಲಬ್ ಕಾರ್ಯದರ್ಶಿ ರಾಜಕುಮಾರ ಅಳ್ಳೆ, ಜಂಟಿ ಕಾರ್ಯದರ್ಶಿ ಸತೀಶ್ ಸ್ವಾಮಿ, ಖಜಾಂಚಿ ಬಸವರಾಜ ಮಡಕಿ, ರೂಪಾಲಿ ನಿತಿನ್ ಕರ್ಪೂರ, ಡಾ. ರಘು ಕೃಷ್ಣಮೂರ್ತಿ, ಸೂರ್ಯಕಾಂತ ರಾಮಶೆಟ್ಟಿ, ಡಾ. ನಿತೇಶ ಬಿರಾದಾರ, ಜಯೇಶ್ ಪಟೇಲ್, ಆಕಾಶ್ ನಾಗಮಾರಪಳ್ಳಿ, ಡಾ. ಶ್ವೇತಾ ಕುಣಕೇರಿ, ಡಾ. ನೀತಾ ರೇಜಂತಲ್, ವೀರೇಶ ಖೇಳಗಿ, ಮನೀಶ್ ರಂಗದಲ್, ಡಾ. ಶ್ವೇತಾ ಮೇಗೂರ ಮತ್ತಿತರರು ಇದ್ದರು.
ಡಾ. ಶ್ರುತಿ ಬಿರಾದಾರ ನಿರೂಪಿಸಿದರು. ವಿಕ್ರಮ ತಗಾರೆ ವಂದಿಸಿದರು.