52 ಸಾವಿರ ಉಚಿತ ಸಸಿ ವಿತರಣೆ

Shivayya Swamy Ek Ped Maa Ke Naam Abhiyan
Published on

ಬೀದರ್: ಏಕ್ ಪೇಡ್ ಮಾ ಕೇ ನಾಮ್ ಅಭಿಯಾನ ಅಂಗವಾಗಿ ಈವರೆಗೆ 52 ಸಾವಿರ ಸಸಿಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.

ಬೆಂಗಳೂರಿನಲ್ಲಿ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಕಾರ್ಯದರ್ಶಿ ರಮಣದೀಪ್ ಚೌಧರಿ ಅವರಿಗೆ ಸಸಿ ವಿತರಿಸಿ ಅವರು ಈ ಮಾಹಿತಿ ನೀಡಿದರು.

ಅಭಿಯಾನದ ಅಂಗವಾಗಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿ ದಕ್ಷಿಣ ಭಾರತದ ರಾಜ್ಯದಲ್ಲಿ 16 ಸಾವಿರ ಬಿಲ್ಪಪತ್ರಿ, 36 ಸಾವಿರ ಬನ್ನಿ, ಜಾಪುಳ, ಆಲ, ನೆಲ್ಲೆಕಾಯಿ, ಬೇವು, ಅರಳಿ ಹಾಗೂ ಇತರ ಸಸಿಗಳನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದರು.

ಮಠಾಧೀಶರು ಹಾಗೂ ಅಧಿಕಾರಿಗಳಿಂದ ಅಭಿಯಾನಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಸಾರ್ವಜನಿಕರು ಉಚಿತ ಸಸಿಗಳನ್ನು ಪಡೆದು, ನೆಟ್ಟು ಪೋಷಿಸುತ್ತಿರುವುದು ಸಂತಸ ಉಂಟು ಮಾಡಿದೆ. ಮುಂದಿನ ಹಂತದಲ್ಲಿ ಉತ್ತರ ಭಾರತದ ರಾಜ್ಯಗಳಲ್ಲಿ ಸಸಿಗಳನ್ನು ವಿತರಿಸುವ ಯೋಜನೆ ಇದೆ ಎಂದು ತಿಳಿಸಿದರು.

ಶಿವಯ್ಯ ಸ್ವಾಮಿ ಅವರು ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಪೀಠದ ಮಾತೆ ಕರುಣಾದೇವಿ ಅವರ ಹೆಸರಲ್ಲಿ 1 ಲಕ್ಷ ಸಸಿ ನೆಡುವಿಕೆ ಹಾಗೂ ವಿತರಣೆ ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯ. ಪರಿಸರದ ಬಗ್ಗೆ ಅರಿವು ಮೂಡಿಸಲು ಹಾಗೂ ಉತ್ತಮ ಪರಿಸರ ನಿರ್ಮಿಸಲು ಈ ರೀತಿಯ ಅಭಿಯಾನಗಳು ಅವಶ್ಯಕ ಎಂದು ರಮಣದೀಪ್ ಚೌಧರಿ ಹೇಳಿದರು.

ಇಲಾಖೆಯ ಉಪ ಕಾರ್ಯದರ್ಶಿ ಶ್ರೀನಿವಾಸ್ ಉಪಸ್ಥಿತರಿದ್ದರು.

ಬೀದರ್‍ನ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ, ಶ್ರೀ ಜಗದ್ಗುರು ಪಂಚಾಚಾರ್ಯ ಯುವಕ ಸಂಘ, ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಪೀಠ, ನೌಬಾದ್‍ನ ಜ್ಞಾನ ಶಿವಯೋಗಾಶ್ರಮ, ಈಶ್ವರಿ ಮಹಿಳಾ ಮಂಡಳ ಹಾಗೂ ಆರತಿ ವಿಕಾಸ ಮಹಿಳಾ ಸಮಿತಿ ವತಿಯಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net