ಪ್ರತಿ ಎಕರೆಗೆ 25 ಸಾವಿರ ಘೋಷಿಸಲು ಸರ್ಕಾರಕ್ಕೆ ಆಗ್ರಹ

Bawalgaon
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (0, -1); aec_lux: 0.0; hist255: 0.0; hist252~255: 0.0; hist0~15: 0.0;
Published on

ಔರಾದ: ಶಾಸಕ ಪ್ರಭು ಚವ್ಹಾಣ ಅವರು ಅತೀವೃಷ್ಠಿಯಿಂದ ಬಾಧಿತಗೊಂಡಿರುವ ಔರಾದ ಹಾಗೂ ಕಮಲಗನರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಮಳೆಯಿಂದಾದ ಹಾನಿಯನ್ನು ಪರಿಶೀಲಿಸಿದರು.

ಬೋಂತಿ ಪಂಚಾಯಿತಿ ವ್ಯಾಪ್ತಿಯ ನಾಮಾನಾಯಕ್ ತಾಂಡಾ, ಬಾವಲಗಾಂವ, ಚೊಂಡಿಮುಖೇಡ್, ಚಿಕ್ಲಿ(ಯು) ತಾಂಡಾ, ಅಕನಾಪೂರ, ಗಂಗನಬೀಡ, ದಾಬಕಾ, ಮುತಖೇಡ್, ನಂದಿ ಬಿಜಲಗಾಂವ, ಚಿಮ್ಮೇಗಾಂವ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಕೆರೆ-ಕಟ್ಟೆ, ಸೇತುವೆಗಳು ಒಡೆದು ಉಂಟಾಗಿರುವ ಹಾನಿಯ ಮಾಹಿತಿ ಪಡೆದರು.

ಮಳೆ ನೀರಿನ ವಿಪರೀತ ಹರಿವಿನಿಂದಾಗಿ ಸೇತುವೆ ಒಡೆದು ನೀರೆಲ್ಲ ರೈತರ ಹೊಲಗಳಿಗೆ ನುಗ್ಗಿ ಎಲ್ಲ ಬೆಳೆಗಳು ನೀರುಪಾಲಾಗಿವೆ. ಸೋಯಾ, ಉದ್ದು, ಹೆಸರು ಹಾಗೂ ಮತ್ತಿತರೆ ಬೆಳೆಗಳು ಈ ವರ್ಷ ಸರಿಯಾಗಿದ್ದವು. ಎಕಾಎಕಿ ಸುರಿದ ಧಾರಾಕಾರ ಮಳೆಗೆ ಎಲ್ಲ ಬೆಳೆಗಳು ಕೊಚ್ಚಿ ಹೋಗಿವೆ ಎಂದು ರೈತರು ಶಾಸಕರೆದುರು ಗೋಳು ತೋಡಿಕೊಂಡರು. ಇದೇ ವೆಳೆ ಶಾಸಕರು ಕೃಷಿ ಭೂಮಿಯಲ್ಲಿ ಓಡಾಡಿ ಬೆಳೆಹಾನಿಯನ್ನು ಗಮನಿಸಿದರು.

ಒಂದೇ ದಿನ 300 ಎಂ.ಎಂ. ಮಳೆಯಾಗಿದ್ದರಿಂದ ನೀರಿನ ರಭಸಕ್ಕೆ ಕೆರೆ-ಕಟ್ಟೆಗಳು, ಸೇತುವೆಗಳು ಒಡೆದು ತೀವ್ರ ಹಾನಿಯಾಗಿದೆ. ಕಾಲುವೆಗಳ ನೀರು ಕೃಷಿ ಭೂಮಿಗಳಿಗೆ ನುಗ್ಗಿ ಬಹಳಷ್ಟು ಹಾನಿಯಾಗಿದೆ. ಜನ-ಜಾನುವಾರುಗಳ ಸಾವಾಗಿರುವ ಪ್ರಕರಣಗಳಿಗೆ ಕೂಡಲೇ ಪರಿಹಾರ ವಿತರಿಸಲು ಕ್ರಮ ವಹಿಸಬೇಕು. ಹಾನಿಯಾಗಿರುವ ರಸ್ತೆ, ಕೆರೆ-ಕಟ್ಟೆ ಮತ್ತು ಸೇತುವೆಗಳ ದುರಸ್ಥಿ ಅಥವಾ ಪುನರ್ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು. ಬೆಳೆ ಹಾನಿಯ ಕುರಿತು ಕಂದಾಯ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾನಿಯಾದ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ಕೆಲವೆಡೆ ಇಂದಿಗೂ ವಿದ್ಯುತ್ ಕಂಬಗಳು ಟ್ರಾನ್ಸ್ಫಾರ್ಮರಗಳನ್ನು ದುರಸ್ಥಿ ಮಾಡದಿರುವ ಬಗ್ಗೆ ಸಾರ್ವಜನಿಕರು ಗಮನಕ್ಕೆ ತಂದಾಗ ಶಾಸಕರು ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಈಗಾಗಲೇ ಜನ ಸಮಸ್ಯೆಯಲ್ಲಿದ್ದಾರೆ. ಅವರಿಗೆ ಇನ್ನಷ್ಟು ಸಮಸ್ಯೆಗೆ ದೂಡುತ್ತಿರುವುದು ಸರಿಯಲ್ಲವೆಂದು ಕೋಪಗೊಂಡರು. ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರಗಳನ್ನು ಬೇಗ ಸರಿಪಡಿಸಿ ವಿದ್ಯುತ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು.

ಅಧಿಕಾರಿಗಳಿಗೆ ತರಾಟೆ: ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಎಂಜಿನೀಯರ್‌ಗಳ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದು ತಾವೇನು ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಎಲ್ಲರೂ ತಮ್ಮ ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸಬೇಕು. ಸಂಕಷ್ಟದಲ್ಲಿರುವ ಜನತೆಗೆ ಸ್ಪಂದಿಸಬೇಕು. ನೊಂದವರಿಗೆ ಸರ್ಕಾರದ ಪರಿಹಾರವನ್ನು ತಲುಪಿಸಲು ಪ್ರಮಾಣಿಕವಾಗಿ ಪ್ರಯತ್ನಿಸಬೇಕು ಎಂದು ತಿಳಿಸಿದರು.

ರೈತರಿಗೆ ಬೆಳೆವಿಮೆಯ ಸೌಲಭ್ಯ ಸಿಗಲಿ: ಕ್ಷೇತ್ರದ ಎಲ್ಲ ರೈತರು ಬೆಳೆವಿಮೆ ಮಾಡಿಸಿಕೊಂಡಿದ್ದಾರೆ. ಅವರಿಗೆ ಲಾಭವಾಗುವ ದಿಶೆಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಸಮೀಕ್ಷೆ ಮಾಡಲು ಹೋಗುವ ಮುನ್ನ ಗ್ರಾಮದಲ್ಲಿ ಡೊಂಗೂರ ಸಾರಿಸಿ ಹೋಗಬೇಕು. ಸಮೀಕ್ಷೆಯಿಂದ ಯಾವೊಂದು ಕೃಷಿ ಭೂಮಿಯೂ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ಬೆಳೆ ವಿಮೆ ವಿಷಯದಲ್ಲಿ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಾರಿ ಅತೀವೃಷ್ಟಿಯಿಂದ ರೈತರು ಸಾಕಷ್ಟು ತೊಂದರೆಯಲ್ಲಿದ್ದಾರೆ. ಅವರಿಗೆ ವಿಮೆಯ ಲಾಭ ಸಿಗಬೇಕು. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಯ ಅಧಿಕಾರಿಗಳು ರೈತರಿಗೆ ಸಹಕರಿಸಬೇಕು ಎಂದು ಶಾಸಕರು ಸೂಚಿಸಿದರು.

ಬಳಿಕ ಮಾತನಾಡಿದ ಶಾಸಕರು, ಅತೀವೃಷ್ಟಿಯಿಂದಾಗಿ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ಸಾಕಷ್ಟು ಹಾನಿಯಾಗಿದೆ. ಬೆಳೆ ನಷ್ಟವಾಗಿ ರೈತರು ಕಂಗಾಗಲಾಗಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಸಚಿವರನ್ನು ಭೇಟಿಯಾಗಿ ಅತೀವೃಷ್ಟಿ ಪೀಡಿತ ಪ್ರದೇಶಗಳಿಗೆ ಪರಿಹಾರ ಘೋಷಿಸುವಂತೆ ಮನವಿ ಸಲ್ಲಿಸಿದ್ದೇನೆ. ವಿಧಾನಸಭಾ ಅಧಿವೇಶನದಲ್ಲಿಯೂ ಹಾನಿಯ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೇನೆ. ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು 10 ಸಾವಿರ ಹೆಕ್ಟೇರ್‌ಗೂ ಹೆಚ್ಚು ಬೆಳೆ ಹಾನಿಯಾಗಿದೆ. ಪ್ರತಿ ಎಕರೆಗೆ ಸುಮಾರು 25 ಸಾವಿರ ಪರಿಹಾರ ಘೋಷಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದೇನೆ. ನಾನು ನಿಮ್ಮೊಂದಿಗಿದ್ದು ಯಾವುದೇ ಕಾರಣಕ್ಕೂ ಆತಂಕಪಡಬಾರದು ಎಂದು ರೈತರಿಗೆ ತಿಳಿಸಿದರು.

ಔರಾದ(ಬಿ) ತಹಸೀಲ್ದಾರರಾದ ಮಹೇಶ ಪಾಟೀಲ, ಕಮಲನಗರ ತಹಸೀಲ್ದಾರರಾದ ಅಮಿತಕುಮಾರ ಕುಲಕರ್ಣಿ, ಔರಾದ, ಕಮಲಗನರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕಿರಣ ಪಾಟೀಲ, ಹಣಮಂತ ಕೌಟಗೆ, ಪಂಚಾಯತ್ ರಾಜ್ ಇಲಾಖೆಯ ಎಇಇ ಸುನೀಲ ಚಿಲ್ಲರ್ಗೆ, ಲೋಕೋಪಯೋಗಿ ಇಲಾಖೆಯ ಎಇಇ ಪ್ರೇಮಸಾಗರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಮಾರುತಿ ರಾಠೋಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಲಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ರಂಗೇಶ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ ಮುಂಗನಾಳ, ಸತೀಷ ಪಾಟೀಲ, ಯೋಗೇಶ ಪಾಟೀಲ, ಧೊಂಡಿಬಾ ನರೋಟೆ, ಪ್ರವೀಣ ಕಾರಬಾರಿ, ಭರತ ಕದಂ, ಮಂಜು ಸ್ವಾಮಿ, ಸಚಿನ ರಾಠೋಡ, ಸುಜಿತ ರಾಠೋಡ, ಪ್ರದೀಪ ಪವಾರ, ಧನಾಜಿ ರಾಠೋಡ, ಸಂಜು ಮುರ್ಕೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net