ಸರ್ಕಾರ ತಕ್ಷಣ ರೈತರ ನೆರವಿಗೆ ಬರಲಿ

kamthan
Published on

ಬೀದರ್: ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಶನಿವಾರ ಬೀದರ್ ದಕ್ಷಿಣ ಕ್ಷೇತ್ರದ ವಿವಿಧೆಡೆ ದಿನವಿಡೀ ಸಂಚರಿಸಿ ಇತ್ತೀಚೆಗೆ ಅತಿವೃಷ್ಟಿಯಿಂದ ಆಗಿರುವ ಬೆಳೆ ನಷ್ಟ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯನ್ನು ಪರಿಶೀಲಿಸಿದರು.

ಕಮಠಾಣಾ, ಬಗದಲ್, ಮನ್ನಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳ ಹೊಲಗಳಿಗೆ ತೆರಳಿ ವ್ಯಾಪಕ ಮಳೆಯಿಂದ ಆಗಿರುವ ಬೆಳೆ ಹಾನಿ ವೀಕ್ಷಿಸಿದರು. ವಾಡಿಕೆಗಿಂತ ಸುರಿದ ಅಧಿಕ ಮಳೆ, ಕಾರಂಜಾ ಹಿನ್ನೀರು, ಕೊತ್ತುರ್ ಬ್ಯಾರೇಜಿನಿಂದ ನೀರು ಬಿಟ್ಟಿದ್ದರಿಂದ ಉದ್ಭವಿಸಿದ ಸಮಸ್ಯೆ, ಹಳ್ಳ-ಸೇತುವೆ ಪಕ್ಕಕ್ಕೆ ನೀರು ನುಗ್ಗಿ ಅಪಾರ ಹಾನಿಯಾಗಿರುವುದನ್ನು ಪರಿಶೀಲಿಸಿದರು. ಸಮೃದ್ಧವಾಗಿ ಬಂದಿದ್ದ ಉದ್ದು, ಹೆಸರು, ಸೋಯಾಬೀನ್, ತೋಗರಿ ತೋಟಗಾರಿಕೆಯ ಮುಂತಾದ ಬೆಳೆ ಹಾಳಾಗಿರುವುದು ವೀಕ್ಷಿಸಿ ಸಂತ್ರಸ್ತ ರೈತರಿಂದ ಮಾಹಿತಿ ಕಲೆ ಹಾಕಿದರು.

ಬುಧೇರಾ-ಮಿರ್ಜಾಪುರ(ಟಿ) ನಡುವಿನ ಹಳ್ಳ ತುಂಬಿ ಹರಿದ ಕಾರಣ ಅಕ್ಕಪಕ್ಕದ ನೂರಾರು ಎಕರೆ ಹೊಲದಲ್ಲಿನ ಬೆಳೆ ಸಂಪೂರ್ಣ ಕೊಚ್ಚಿಕೊಂಡು ಹೋಗಿವೆ. ಈ ಹಳ್ಳಕ್ಕೆ ಕಮಠಾಣಾ ಕಡೆಯಿಂದ ಭಾರಿ ನೀರು ಬರುತ್ತವೆ. ಹಳ್ಳದಲ್ಲಿ ಭಾರಿ ಹೂಳು ತುಂಬಿದ್ದರಿAದ ಹಾಗೂ ನೀರು ಸುಗಮ ಹೋಗಲು ಮಾರ್ಗವಿಲ್ಲದ ಕಾರಣ ಸ್ವಲ್ಪವೇ ಜಾಸ್ತಿ ಮಳೆ ಬಿದ್ದರೂ ಅಕ್ಕಪಕ್ಕದ ಜಮೀನಿಗೆ ನೀರು ನುಗ್ಗಿ ಭಾರಿ ಹಾನಿಯಾಗುತ್ತಿದೆ. ಹಲವು ಜಮೀನಿನಿಂದ ಫಲವತ್ತಾದ ಮಣ್ಣು ಸಹ ಕೊಚ್ಚಿಹೋಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ರೈತರು ಶಾಸಕರೆದುರು ಗೋಳು ತೋಡಿಕೊಂಡರು.

ಸ್ಥಳದಲ್ಲಿದ್ದ ವಿವಿಧ ಇಲಾಖೆ ಅಧಿಕಾರಿಗಳ ಜೊತೆಗೆ ಈ ಬಗ್ಗೆ ಚರ್ಚಿಸಿದ ಶಾಸಕರು, ಹಳ್ಳದಲ್ಲಿ ಹೂಳುತ್ತುವಿಕೆ, ಸಣ್ಣ ಸೇತುವೆ ಎತ್ತರಿಸುವಿಕೆ, ನೀರು ಸುಗಮ ಹೋಗುವ ನಿಟ್ಟಿನಲ್ಲಿ ಸಮಗ್ರ ಯೋಜನೆ ರೂಪಿಸಿ ವರದಿ ಸಿದ್ಧಪಡಿಸಲು ತಿಳಿಸಿದರು. ಕ್ಷೇತ್ರದಲ್ಲಿ  ಹಾಳಾಗಿರುವ ರಸ್ತೆ, ಸೇತುವೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ವಿದ್ಯುತ್ ಕಂಬ, ಟ್ರಾನ್ಸ್ ಫರ್ಮರ್ ಸಾಕಷ್ಟು ಕಡೆ ಹಾಳಾಗಿದ್ದು, ಕೂಡಲೆ ಸರಿಪಡಿಸಿ ವಿದ್ಯುತ್ ಸಮಸ್ಯೆ ನಿವಾರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳು ಬೆಳೆ ಹಾನಿ ಬಗ್ಗೆ ಸಮರ್ಪಕ ಸಮೀಕ್ಷೆ ನಡೆಸಬೇಕು. ಯಾವೊಬ್ಬ ರೈತರು ಸಹ ಸಮೀಕ್ಷೆಯಿಂದ ಹೊರಗಿರಬಾರದು ಎಂದು ತಾಕೀತು  ಮಾಡಿದರು.

ಅತಿವೃಷ್ಟಿಯಿಂದಾಗಿ ದಕ್ಷಿಣ ಕ್ಷೇತ್ರದಲ್ಲಿ ೩ ಸಾವಿರ ಎಕರೆಗೂ ಅಧಿಕ ಬೆಳೆ ನಷ್ಟವಾಗಿದೆ. ನೂರಾರು ಮನೆಗಳು ಕುಸಿದಿವೆ. ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ. ನಿಖರ ಹಾನಿ ಬಗ್ಗೆ ಸಮರ್ಪಕ ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ  ಸರ್ಕಾರ ಪ್ರತಿ ಹೆಕ್ಟೇರ್ ಗೆ ೫೦ ಸಾವಿರ ರೂ.ಪರಿಹಾರ ನೀಡಿ ನೆರವಿಗೆ ಬರಬೇಕು. ಈಗಾಗಲೇ  ವಿಧಾನಸಭೆ ಅಧಿವೇಶನದಲ್ಲೂ  ಕ್ಷೇತ್ರದ ಸಮಸ್ಯೆ ಕುರಿತು ಸರ್ಕಾರದ ಗಮನ ಸೆಳೆಯಲಾಗಿದೆ. ಬೆಳೆ ನಷ್ಟ ಅನುಭವಿಸಿದ ರೈತರು ಧೃತಿಗೆಡುವ ಅಗತ್ಯವಿಲ್ಲ. ಅಗತ್ಯ ನೆರವು, ಪರಿಹಾರಕ್ಕೆ ನಿಮ್ಮ ಪರವಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುವುದಾಗಿ ಶಾಸಕರು ಅಭಯ ನೀಡಿದರು.

ಬಳಿಕ ಅಧಿಕಾರಿಗಳ ಸಭೆ ನಡೆಸಿ ರೈತರಿಗೆ ನ್ಯಾಯ ಒದಗಿಸಿ ಕೊಡುವುದು ನಮ್ಮೆಲ್ಲರ ಕರ್ತವ್ಯ ಹೀಗಾಗಿ ಅಧಿಕಾರಿಗಳು ರೈತರ ಬೆಳೆ ಹಾನಿ ಕುರಿತು ಶೀಘ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ರೈತ ಸಂತ್ರಸ್ತರಿಗೆ ಪರಿಹಾರ ದೊರೆಯುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ರವೀಂದ್ರ ದಾಮಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ, ಜಂಟಿ ಕೃಷಿ ನಿರ್ದೇಶಕರಾದ ದೇವಿಕಾ, ಸಹಾಯಕ ಕೃಷಿ ನಿರ್ದೇಶಕರಾದ ಆರತಿ ಪಾಟೀಲ, ಜೆಸ್ಕಾಂ ಎಇಇ ವಿಜಯಕುಮಾರ ಪಾಂಚಾಳ, ಟಿಎಚ್‌ಓ ಸಂಗಾರೆಡ್ಡಿ,  ತಾಪಂ ಸಹಾಯಕ ನಿರ್ದೇಶಕರಾದ ಸಂಜುಕುಮಾರ, ಸುದೇಶ್,  ಕಂದಾಯ ಇಲಾಖೆಯ ಅಧಿಕಾರಿಗಳು ರೈತರು, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net