ರೇಬಿಸ್ ರೋಗದ ಜಾಗೃತಿ ವಹಿಸಿ

Global academy - Copy
Published on
ಬೀದರ್: ಸಾರ್ವಜನಿಕರು ರೇಬಿಸ್ ರೋಗದ ಬಗ್ಗೆ ಜಾಗೃತಿ ವಹಿಸಬೇಕು ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ. ಸಮುದ್ರ ಕುಲಕರ್ಣಿ ಸಲಹೆ ಮಾಡಿದರು. ಬೀದರ್‍ನ ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಈಚೆಗೆ ನಡೆದ ರೇಬಿಸ್ ರೋಗ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೇಬಿಸ್ ಮಾರಣಾಂತಿಕ ರೋಗವಾಗಿದೆ. ಸೋಂಕಿತ ಪ್ರಾಣಿ ಇನ್ನೊಂದು ಪ್ರಾಣಿ, ಮನುಷ್ಯನನ್ನು ಪರಚಿದಾಗ ಅಥವಾ ಕಚ್ಚಿದಾಗ ರೋಗ ಹರಡುತ್ತದೆ. ರೋಗ ಪೀಡಿತ ಪ್ರಾಣಿಯ ಜೊಲ್ಲು ಪ್ರಾಣಿ ಅಥವಾ ಮನುಷ್ಯನ ಲೋಳೆ ಪೊರೆ ಸಂಪರ್ಕಕ್ಕೆ ಬಂದಾಗ ರೋಗ ವರ್ಗಾವಣೆ ಆಗುತ್ತದೆ ಎಂದು ತಿಳಿಸಿದರು. ರೋಗ ತಗಲುವಿಕೆ ಹಾಗೂ ಲಕ್ಷಣ ಗೋಚರಿಸಲು ಮೂರು ತಿಂಗಳು ಹಿಡಿಯಲಿದೆ. ಜ್ವರ, ತಲೆ ನೋವು, ವಾಕರಿಕೆ, ಅತಿಯಾಗಿ ಜೊಲ್ಲು ಸೋರುವುದು, ನುಂಗಲು ಕಷ್ಟವಾಗುವುದು, ನೀರು ಕಂಡರೆ ಭಯ ಉಂಟಾಗುವುದು ರೋಗದ ಲಕ್ಷಣಗಳಾಗಿವೆ. ಪ್ರಾಣಿಗಳು ಕಚ್ಚಿದರೆ ಮಕ್ಕಳು ಹಿರಿಯರ ಗಮನಕ್ಕೆ ತರಬೇಕು ಎಂದು ಹೇಳಿದರು. ರೇಬಿಸ್ ರೋಗಕ್ಕೆ ನಿಖರ ಚಿಕಿತ್ಸೆ ಇಲ್ಲ. ಹೀಗಾಗಿ ಸಾರ್ವಜನಿಕರು ರೇಬಿಸ್ ಶಂಕಿತ ಪ್ರಾಣಿ ಕಚ್ಚಿದರೆ 0, 3, 7, 14 ಹಾಗೂ 28ನೇ ದಿನ ರೇಬಿಸ್ ನಿರೋಧಕ ಚುಚ್ಚು ಮದ್ದು ತೆಗೆದುಕೊಳ್ಳಬೇಕು. 90 ದಿನಗಳ ಒಳಗೆ ಕೂಡ ಒಂದು ಚುಚ್ಚು ಮದ್ದು ಪಡೆಯಬೇಕು. ಜತೆಗೆ ಕಡ್ಡಾಯವಾಗಿ ಟೆಟ್ನಸ್ ಟಾಕ್ಸೈಡ್ ಇಂಜಕ್ಷನ್ ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಬೀದಿ ನಾಯಿಗಳ ನಿಯಂತ್ರಣಕ್ಕೆ ಪ್ರಾಣಿ ಸಂತಾನ ನಿಯಂತ್ರಣ ಕಾಯ್ದೆ 2023 ಅನ್ನು ಅನುಸರಿಸಬೇಕು ಎಂದು ಹೇಳಿದರು. ಅಕಾಡೆಮಿ ಅಧ್ಯಕ್ಷ, ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರ, ಪ್ರಾಚಾರ್ಯ ಸಮೋದ್ ಮೋಹನನ್ ಉಪಸ್ಥಿತರಿದ್ದರು. 5 ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net