

ಬೀದರ್: ತಾಲ್ಲೂಕಿನ ಕೊಳಾರ(ಕೆ) ಕೈಗಾರಿಕಾ ಪ್ರದೇಶದಲ್ಲಿ ನಿವೇಶನ ಹಂಚಿಕೆಗೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಅರ್ಜಿ ಆಹ್ವಾನಿಸಿದ್ದು, ನಿಯಮ ಉಲ್ಲಂಘಿಸಲಾಗಿದೆ ಎಂದು ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿ ಆರೋಪಿಸಿದೆ.
ಸಮಿತಿಯ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಉದ್ಯಮ ಸ್ಥಾಪನೆಗೆ ಮಹಿಳೆಯರಿಗೆ ವರ್ಗವಾರು ಮೀಸಲಿರುವ ನಿವೇಶನಗಳ ಬಗ್ಗೆ ಉಲ್ಲೇಖಿಸಿಲ್ಲ. ಸಾಮಾನ್ಯವಾಗಿ ಅರ್ಜಿಗೆ 30 ದಿನಗಳ ಕಾಲಾವಕಾಶ ಇರುತ್ತದೆ. ಇಲ್ಲಿ 16 ದಿನ ಮಾತ್ರ ನೀಡಲಾಗಿದೆ ಎಂದು ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ವಿಶಾಲ್ ದೊಡ್ಡಿ ದೂರಿದರು.
ಕಚೇರಿಯ ಕೆಲವರು ತಮಗೆ ಬೇಕಾದವರಿಗೆ ನಿವೇಶನ ಹಂಚಿಕೆ ಮಾಡಲು ಪ್ರಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಎರಡು-ಮೂರು ದಿನಗಳಿಂದ ಅರ್ಜಿ ಸಲ್ಲಿಕೆ ಸರ್ವರ್ ಬಿಜಿ ಬರುತ್ತಿದೆ ಎಂದು ತಿಳಿಸಿದರು.
ನಿಯಮ ಉಲ್ಲಂಘನೆ ವಿರುದ್ಧ ಕ್ರಮ ಜರುಗಿಸಬೇಕು. ನಿಯಮಾನುಸಾರ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಸಂಗಮೇಶ ಭಾವಿದೊಡ್ಡಿ, ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ರಜನಿಕಾಂತ ಹುಪ್ಪಳಕರ್, ಉಪಾಧ್ಯಕ್ಷರಾದ ಪುಟ್ಟು ಚತುರೆ ಗಾದಗಿ, ಅನಿಲಕುಮಾರ ಮಡ್ಡೆ, ಯುವ ಮುಖಂಡ ಪ್ರವೀಣ್ ಮೋರೆ ಮತ್ತಿತರರು ಇದ್ದರು.