

ಬೀದರ್: ವಂಚಕರು ಗೋರ್ಟಾ-ಬೇಮಳಖೇಡ-ನೌಬಾದ್‍ನ ಜ್ಞಾನಶಿವಯೋಗಾಶ್ರಮದ ಡಾ. ರಾಜಶೇಖರ ಶಿವಾಚಾರ್ಯರ ವ್ಯಾಟ್ಸ್‍ಆ್ಯಪ್ ಹ್ಯಾಕ್ ಮಾಡಿ ಸಂಪರ್ಕ ಪಟ್ಟಿಯಲ್ಲಿದ್ದ ಭಕ್ತರ ಸಂಖ್ಯೆಗಳಿಗೆ ತುರ್ತು ಸಂದೇಶ ಕಳುಹಿಸಿ ಹಣ ವಂಚಿಸಿದ್ದಾರೆ.
ವಂಚಕರು ಸ್ವಾಮೀಜಿ ಅವರ ವ್ಯಾಟ್ಸ್‍ಆ್ಯಪ್ ಸಂಖ್ಯೆಯಿಂದ ಯುಪಿಐ ಕೆಲಸ ಮಾಡುತ್ತಿಲ್ಲ. ತುರ್ತಾಗಿ ರೂ. 60 ಸಾವಿರ ಬೇಕಿದೆ. ಮೊಬೈಲ್ ಸಂಖ್ಯೆ 9905530397 (ಅಶೋಕ)ಗೆ ಫೋನ್ ಪೇ ಅಥವಾ ಗೂಗಲ್ ಪೇ ಮಾಡಿ. ಎರಡು ಗಂಟೆಗಳಲ್ಲಿ ಮರಳಿಸಲಾಗುವುದು ಎಂದು ಸಂದೇಶ ಕಳುಹಿಸಿದ್ದರು. ಅದನ್ನು ನಂಬಿ ವಂಚನೆಗೊಳಗಾಗಿದ್ದೇವೆ ಎಂದು ಭಕ್ತರು ತಿಳಿಸಿದ್ದಾರೆ.
ಉದಗಿರದ ಆಶಾ ಚಂದ್ರಕಾಂತ ಚಿಂತಾಮಣಿ ರೂ. 50 ಸಾವಿರ, ಶ್ರೀಶೈಲಂನ ರಮೇಶ ವಾರದ ರೂ. 30 ಸಾವಿರ, ರೇವಣಸಿದ್ದಪ್ಪ ತೇಗಂಪುರ ರೂ. 25 ಸಾವಿರ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ಭಕ್ತರು ವಂಚನೆ ಕುರಿತು ಶ್ರೀಶೈಲಂ, ಉದಗಿರ ಹಾಗೂ ಬೀದರ್ ಸೈಬರ್ ಕ್ರೈಂ ಠಾಣೆಗೆ ದೂರು ಕೊಟ್ಟಿದ್ದಾರೆ.
ವಂಚಕರ ಸಂದೇಶ ನಂಬಿ ಮೂವರು ಹಣ ಕಳೆದುಕೊಂಡಿರುವುದು ಗೊತ್ತಾಗಿದೆ. ರಾಜಶೇಖರ ಶಿವಾಚಾರ್ಯರ ಇನ್ನೂ ಅನೇಕ ಭಕ್ತರಿಗೆ ವಂಚನೆಯಾಗಿರುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ತಿಳಿಸಿದ್ದಾರೆ.
ತಮ್ಮ ವ್ಯಾಟ್ಸ್‍ಆ್ಯಪ್ ಹ್ಯಾಕ್ ಮಾಡಿದ ವಂಚಕರಿಂದ ಭಕ್ತರು ವಂಚನೆಗೆ ಒಳಗಾಗಿರುವುದು ಅತೀವ ದುಃಖ ಉಂಟು ಮಾಡಿದೆ ಎಂದು ಡಾ. ರಾಜಶೇಖರ ಶಿವಾಚಾರ್ಯರು ಹೇಳಿದ್ದಾರೆ.
ಭಕ್ತರು ಸುಳ್ಳು ಸಂದೇಶಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.