

ಬೀದರ್: 2024ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಸೇರಿದಂತೆ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಮತಗಳ್ಳತನ ಮಾಡಿದೆ ಎಂದು ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಕ್ಕೆ ತೀಕ್ಷ್ಣ ತಿರುಗೇಟು ನೀಡಿರುವ ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆಗಿರುವ ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು, ಕಲ್ಯಾಣ ಕರ್ನಾಟಕ ಭಾಗದ ಐದೂ ಕ್ಷೇತ್ರಗಳಲ್ಲಿ ಗೆದ್ದಿರುವ ಕಾಂಗ್ರೆಸ್ ಮತಗಳ್ಳತನ ಮಾಡಿಯೇ ಈ ಗೆಲುವು ಸಾಧಿಸಿದೆಯೇ ಎಂದು ಪ್ರಶ್ನಿಸಿದ್ದಾರೆ.
ಕಳೆದ ಒಂದೂವರೆ ದಶಕದಿಂದೀಚೆಯಿAದ ದೇಶದ ಬಹುತೇಕ ಕಡೆಗಳಲ್ಲಿ ಜನರಿಂದ ತಿರಸ್ಕೃತವಾಗಿರುವ ಕಾಂಗ್ರೆಸ್ ನಾಯಕರು ಅಕ್ಷರಶಃ ಹತಾಶ ಸ್ಥಿತಿಯಲ್ಲಿದ್ದಾರೆ. ಹೀನಾಯ ಸೋಲುಗಳಿಂದ ಕಂಗೆಟ್ಟಿದ್ದಾರೆ. ಹೀಗಾಗಿ ತಾನು ಗೆದ್ದ ಕ್ಷೇತ್ರಗಳಲ್ಲಿ ಯಾವುದೇ ಅಕ್ರಮಗಳು ಇರಲ್ಲ, ಆದರೆ ಬಿಜೆಪಿ ಗೆದ್ದ ಕಡೆಗಳಲ್ಲಿ ಮತಗಳ್ಳತನ ಇನ್ನಿತರೆ ಅಕ್ರಮಗಳು ನಡೆಯುತ್ತಿವೆ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ದೇಶದ ಪ್ರತಿಷ್ಠಿತ ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗದ ಮೇಲೆ ಒಂದಿಷ್ಟೂ ನಂಬಿಕೆ ಇಲ್ಲ ಎಂಬುದಕ್ಕೆ ಇವರ ತಲೆಬುಡವಿಲ್ಲದ ಆರೋಪಗಳೇ ನಿದರ್ಶನವಾಗಿವೆ ಎಂದು ಇಲ್ಲಿ ಹೊರಡಿಸಿರುವ ಪ್ರಕಟಣೆಯಲ್ಲಿ ದೂರಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಎಲ್ಲ ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಆದರೆ ೨೦೨೪ರಲ್ಲಿ ಈ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಈ ಸಲವೂ ಕಲ್ಯಾಣದ ಬಹುತೇಕ ಕಡೆಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ಬಗ್ಗೆ ಚುನಾವಣಾಪೂರ್ವ ಸಮೀಕ್ಷೆ ತಿಳಿಸುತ್ತಿದ್ದವು. ಆದರೆ ಫಲಿತಾಂಶ ಉಲ್ಟಾ ಹೊಡೆಯಿತು. ಹಾಗಾದರೆ ಈ ಎಲ್ಲ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸಲು ಚುನಾವಣೆ ಅಕ್ರಮ, ಮತಗಳ್ಳತನ ಕಾರಣವೇ? ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಉದ್ಭವಿಸುತ್ತಿವೆ. ಯಾವುದೋ ಒಂದು ಕ್ಷೇತ್ರದ ಬಗ್ಗೆ ಅಸಂಬದ್ಧ, ಅವೈಜ್ಞಾನಿಕ ಲೆಕ್ಕಾಚಾರದ ತರ್ಕ ನೀಡುತ್ತಿರುವ ಕಾಂಗ್ರೆಸ್ ನಾಯಕರು ಇದಕ್ಕೆ ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.
ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಇದೇ ವ್ಯವಸ್ಥೆಯಡಿ ಕಾಂಗ್ರೆಸ್ ಆರು ದಶಕ ಕಾಲ ಈ ದೇಶವನ್ನಾಳಿದೆ. ಮತದಾನ ಭಾರತದ ಪ್ರಜೆಗಳಿಗೆ ನೀಡಿರುವ ಬಹು ದೊಡ್ಡ ಸಂವಿಧಾನಬದ್ಧವಾದ ಹಕ್ಕಾಗಿದೆ. ಪ್ರಜೆಗಳ ಕೈಯಲ್ಲೇ ಅಧಿಕಾರದ ಮೂಗುದಾರವಿದೆ. ಪ್ರಜೆಗಳು ಮತಾಸ್ತ್ರದ ಮೂಲಕ ತಮಗಿಷ್ಟದ ಸರ್ಕಾರ ಕೊಡುತ್ತ ಬಂದಿದ್ದಾರೆ. ತಮಗೆ ಉತ್ತಮರೆನಿಸಿದ್ದವರಿಗೆ ಆಯ್ಕೆ ಮಾಡುತ್ತಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಸಹ ಪ್ರಜೆಗಳು ತಮ್ಮ ನಿರ್ಣಯ ಕೊಟ್ಟಿದ್ದಾರೆ. ಜನತಾ ನ್ಯಾಯಾಲಯ ಕೊಟ್ಟ ತೀರ್ಪಿಗೆ ತಲೆಬಾಗಲೇಬೇಕು. ಇದನ್ನು ಬಿಟ್ಟು ಚುನಾವಣೆ ಮುಗಿದ ೧೫ ತಿಂಗಳ ಬಳಿಕ ಮತಗಳ್ಳತನ ಎಂದು ಠುಸ್ ಪಟಾಕಿ ಸಿಡಿಸಿದ ಕಾಂಗ್ರೆಸ್ ನಾಯಕರು ನಗೆಪಾಟಲಿಗೀಡಾಗಿದ್ದಾರೆ. ಕಾಂಗ್ರೆಸ್ ನಾಯಕರ ಈ ಆರೋಪ ದೇಶದ ಪ್ರಜಾತಂತ್ರ ವ್ಯವಸ್ಥೆ ಹಾಳು ಮಾಡುವ ದುರುದ್ದೇಶ ಹೊಂದಿವೆ ಎಂದು ಕಿಡಿಕಾರಿದ್ದಾರೆ.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಇತರೆ ಕಾಂಗ್ರೆಸ್ ನಾಯಕರು ಹಿಟ್ ಆ್ಯಂಡ್ ರನ್ ಹೇಳಿಕೆಗಳು ನೀಡುವಲ್ಲಿ ನಿಸ್ಸೀಮರು. ಇವರು ಮಾಡುವ ಆರೋಪಗಳಿಗೂ ವಾಸ್ತವಕ್ಕೂ ಸಂಬAಧವೇ ಇರುವುದಿಲ್ಲ. ಇವರ ಮಾತಿಗೆ ರಾಜ್ಯದ ಕೆಲ ಕಾಂಗ್ರೆಸ್ ನಾಯಕರು ತಲೆಯಾಡಿಸುತ್ತಿದ್ದಾರೆ. ಮತಗಳ್ಳತನದ ಬಗ್ಗೆ ಆರೋಪ ಮಾಡಿರುವ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟೀಸ್ ಕೊಟ್ಟಿದೆ. ಅದಕ್ಕೆ ಸಾಕ್ಷ್ಯ ಕೊಡಲು ತಯಾರಿಲ್ಲ. ಕಾಂಗ್ರೆಸ್ ಪಕ್ಷದ ಸಚಿವರು, ಕೆಲ ಮುಖಂಡರೇ ಈಗ ರಾಹುಲ್ ಆರೋಪಕ್ಕೆ ಕ್ಯಾತೆ ತೆಗೆದಿದ್ದಾರೆ. ಸತ್ಯ ಹೇಳಿದ ಸಹಕಾರ ಸಚಿವ ರಾಜಣ್ಣ ಅವರನ್ನು ಮಂತ್ರಿ ಸ್ಥಾನದಿಂದ ಕೊಕ್ ನೀಡಲಾಗಿದೆ. ಇದೇ ಕಾಂಗ್ರೆಸ್ ಸಂಸ್ಕೃತಿ ಎಂದು ಜರಿದಿದ್ದಾರೆ.
ಮತಗಳ್ಳತನದ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ದೇಶದ ಪ್ರಬುದ್ಧ ಮತದಾರರಿಗೆ ಅಗೌರವಿಸುವ, ಡಾ. ಅಂಬೇಡ್ಕರ್ ಅವರು ನೀಡಿದ ಸಂವಿಧಾನಬದ್ಧ ಮತದ ಹಕ್ಕಿಗೆ ಚ್ಯುತಿ ತರುವ ಕೆಲಸ ಮಾಡುತ್ತಿದ್ದಾರೆ. ನೈತಿಕತೆ ಇದ್ದರೆ ಕಾಂಗ್ರೆಸ್ ನಾಯಕರು ವೋಟ್ ಚೋರಿ ಎಂಬ ಬೀದಿನಾಟಕ (ರೋಡ್ ಶೋ) ಬಂದ್ ಮಾಡಿ ದೇಶದ ಜನತೆಗೆ ಕ್ಷಮೆಯಾಚನೆ ಮಾಡಲಿ ಎಂದು ಡಾ.ಬೆಲ್ದಾಳೆ ಒತ್ತಾಯಿಸಿದ್ದಾರೆ.