ಖಾಸಗಿ ಶಾಲಾ, ಕಾಲೇಜು ದುಬಾರಿ ಶುಲ್ಕದ ವಿರುದ್ಧ ಹೋರಾಟ

Karave Meetging - Copy
Published on

ಬೀದರ್: ದುಬಾರಿ ಶುಲ್ಕ ಪಡೆಯುತ್ತಿರುವ ಜಿಲ್ಲೆಯ ಖಾಸಗಿ ಶಾಲಾ, ಕಾಲೇಜುಗಳ ವಿರುದ್ಧ ಬರುವ ದಿನಗಳಲ್ಲಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಸೋಮನಾಥ ಮುಧೋಳ ಹೇಳಿದರು.

ನಗರದ ಹೋಟೆಲ್ ಕೃಷ್ಣದರ್ಶಿನಿ ಸಭಾಂಗಣದಲ್ಲಿ ಭಾನುವಾರ ನಡೆದ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್‍ಗಳು ನಾಯಿ ಕೊಡೆಗಳಂತೆ ತಲೆ ಎತ್ತಿವೆ. ಅದಾಗಿಯೂ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೌನ ವಹಿಸಿದ್ದಾರೆ ಎಂದು ಆಪಾದಿಸಿದರು.

ವೇದಿಕೆಯನ್ನು ಬೇರುಮಟ್ಟದಿಂದ ಇನ್ನಷ್ಟು ಬಲಪಡಿಸಲು ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ತಲಾ 25 ಗ್ರಾಮ ಘಟಕಗಳನ್ನು ರಚಿಸಬೇಕು ಎಂದು ತಾಲ್ಲೂಕು ಅಧ್ಯಕ್ಷರಿಗೆ ಸಲಹೆ ನೀಡಿದರು.

ಸೆಪ್ಟೆಂಬರ್ 1 ರಿಂದ ಜಿಲ್ಲೆಯಲ್ಲಿ ವೇದಿಕೆಯ ಕಾರ್ಯಕರ್ತರ ಸಂಪರ್ಕ ಅಭಿಯಾನ ಹಾಗೂ ‘ಕರವೇಗೆ ಸೇರಲು ಮುಂದಾಗಿ ಕನ್ನಡ ಉಳಿಸಲು ಕೈಜೋಡಿಸಿ’ ಅಭಿಯಾನ ಪ್ರಾರಂಭಿಸಬೇಕು ಎಂದು ಹೇಳಿದರು.

ವೇದಿಕೆಯ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಸೋಮಶೇಖರ ಸಜ್ಜನ್, ವಿವೇಕ್ ನಿರ್ಮಳೆ, ನಾಗಯ್ಯ ಸ್ವಾಮಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಗೌಡ, ಬೀದರ್ ತಾಲ್ಲೂಕು ಅಧ್ಯಕ್ಷ ವೀರಶೆಟ್ಟಿ ಗೌಸಪುರೆ, ಭಾಲ್ಕಿ ತಾಲ್ಲೂಕು ಅಧ್ಯಕ್ಷ ಬಂಡೆಪ್ಪ ಜಿ. ಕರಸಣ್ಣ, ಹುಮನಾಬಾದ್ ತಾಲ್ಲೂಕು ಅಧ್ಯಕ್ಷ ವೀರೇಶ್ ರೆಡ್ಡಿ, ಔರಾದ್ ತಾಲ್ಲೂಕು ಅಧ್ಯಕ್ಷ ಅನಿಲ್ ಹೇಡೆ, ಬಸವಕಲ್ಯಾಣ ತಾಲ್ಲೂಕು ಅಧ್ಯಕ್ಷ ಗಣೇಶ ಸಾತಣೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net