

ಬೀದರ್: ಬ್ರಿಮ್ಸ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಹೆಚ್ಚಾಗಿದೆ. ಸೂಕ್ತ ಚಿಕಿತ್ಸೆ ಸಿಗದಿರುವ ಬಗ್ಗೆ ಹಾಗೂ ಅಗತ್ಯ ವ್ಯವಸ್ಥೆ ಕಲ್ಪಿಸದಿರುವ ಬಗ್ಗೆ ದಿನವೂ ರೋಗಿಗಳ, ಕುಟುಂಬಸ್ಥರ ಗೋಳು ಸಾಮಾನ್ಯವಾಗಿವೆ. ಸಮಸ್ಯೆ ಹೊತ್ತು ಬರುವವರಿಗೆ ಸೂಕ್ತ ಚಿಕಿತ್ಸೆ ನೀಡದೇ ಅಸಡ್ಡೆ ವಹಿಸುವುದು ಸಹಿಸಲಾಗದು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಎಚ್ಚರಿಸಿದ್ದಾರೆ.
ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಬೀದರ್ ದಕ್ಷಿಣ ಕ್ಷೇತ್ರದ ಮನ್ನಾಎಖ್ಖೆಳ್ಳಿಯಲ್ಲಿ ಇತ್ತೀಚೆಗೆ ನಾಯಿ ಕಡಿದು ಗಾಯಗೊಂಡ ಮಕ್ಕಳು ಸೇರಿದಂತೆ ಇತರೆ ರೋಗಿಗಳ ಆರೋಗ್ಯ ವಿಚಾರಿಸಿದ ಅವರು, ಆಸ್ಪತ್ರೆಯಲ್ಲಿ ಸಿಗುತ್ತಿರುವ ಚಿಕಿತ್ಸೆ ಹಾಗೂ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ರೋಗಿಗಳು ಹಾಗೂ ಸಂಬAಧಿಕರು ಹಲವಾರು ಗೋಳು ತೋಡಿಕೊಂಡಿದ್ದಕ್ಕೆ ಶಾಸಕರು ಬ್ರಿಮ್ಸ್ ಅವ್ಯವಸ್ಥೆ ಬಗ್ಗೆ ಸಿಡಿಮಿಡಿಗೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೭೫೦ ಹಾಸಿಗೆ ಆಸ್ಪತ್ರೆಯಿದೆ. ಕೋಟ್ಯಂತರ ಹಣ ಬರುತ್ತಿದೆ. ಇಷ್ಟಾದರೂ ಸೂಕ್ತ ಚಿಕಿತ್ಸೆ ಕಲ್ಪಿಸದಿರುವುದು ನೋವಿನ ಸಂಗತಿ. ಬರುವ ಆ.೧೧ರಂದು ಶುರುವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿ ಗಡಿ ಜನರ ಆರೋಗ್ಯದ ಹಿತದಿಂದ ಸರ್ಕಾರದ ಗಮನ ಸೆಳೆಯುವೆ ಎಂದರು.
ಮನ್ನಾಎಖ್ಖೆಳ್ಳಿಯಲ್ಲಿ ನಾಯಿ ಕಡಿತದಿಂದ ಗಾಯಗೊಂಡ ಬಾಲಕನಿಗೆ ಬ್ರಿಮ್ಸ್ ಆಸ್ಪತ್ರೆಗೆ ತರಲಾಗಿತ್ತು. ಆದರೆ ಇಲ್ಲಿ ರೇಬಿಸ್ ಇಂಜೆಕ್ಷನ್ ಇಲ್ಲ ಎಂದು ವೈದ್ಯರು ಹೇಳಿದರು.
ಹೊರಗಿನಿಂದ ಇಂಜೆಕ್ಷನ್ ತರಬೇಕಾಯಿತು. ಔಷಧಿ ಕೊರತೆ ಇರುವ ಬಗ್ಗೆ ಚಿಕಿತ್ಸೆ ಬಾಲಕನ ಪಾಲಕರು ನನಗೆ ದೂರವಾಣಿ ಮೂಲಕ ತಿಳಿಸಿದರು. ನಾನು ತಕ್ಷಣ ಜಿಲ್ಲಾಧಿಕಾರಿಗಳ ಗಮನಕ್ಕೆ ವಿಷಯ ತಂದಿದ್ದೇನೆ. ಡಿಸಿ ಅವರು ವಿಷಯ ಗೊತ್ತಾದ ತಕ್ಷಣ ಬ್ರಿಮ್ಸ್ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ರೇಬಿಸ್ ಇಂಜೆಕ್ಷನ್ ಸ್ಟಾಕ್ ಇರುವುದು ಪತ್ತೆಯಾಗಿದೆ. ಸ್ಟಾಕ್ ಇದ್ದರೂ ಇಂಜೆಕ್ಷನ್ ಕೊಡದಿರುವುದು ತಪ್ಪು ಎಂದು ಕಿಡಿಕಾರಿದರು.
ಅಂದು ನಾನು ಜಿಲ್ಲೆಯ ಹೊರಗಿದ್ದ ಕಾರಣ ಇಂದು ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಇಲ್ಲಿರುವ ಕುಂದುಕೊರತೆ ಕುರಿತು ಅಹವಾಲು ಸ್ವೀಕರಿಸಿ ಸಮಸ್ಯೆಗಳನ್ನು ಬಗೆಹರಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಂದು ಔಷಧಿ ಕೊರತೆಗೆ ವೈದ್ಯರ ನಿರ್ಲಕ್ಷ್ಯ ಕಾರಣವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಬಡ ಜನರು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಾಗ ವೈದ್ಯರು ಹಾಗೂ ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದ್ದೇನೆ. ನಿರ್ಲಕ್ಷ್ಯ ವಹಿಸಿದವರು ಯಾರಿದ್ದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿರುವೆ ಎಂದರು.