

ಬೀದರ್: ಅಧ್ಯಾತ್ಮ ಹಾಗೂ ಆಯುರ್ವೇದದಲ್ಲಿ ಬಿಲ್ಪಪತ್ರಿಗೆ ಬಹಳ ಮಹತ್ವ ಇದೆ ಎಂದು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ನೆರೆಯ ತೆಲಂಗಾಣದ ಸದಾಶಿವಪೇಟ್‍ನ ಚೌಕಿ ಮಠದಲ್ಲಿ ಏಕ್ ಲಾಖ್ ಪೇಡ್ ಮಾ ಕೇ ನಾಮ್ ಅಭಿಯಾನ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ 79ನೇ ಜನ್ಮ ವರ್ಧಂತಿ ಮಹೋತ್ಸವ, ಪಂಚವಟಿ ನಿರ್ಮಾಣ ಹಾಗೂ ಬಿಲ್ವಪತ್ರಿ ಸಸಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವನಿಗೆ ಅತ್ಯಂತ ಪ್ರಿಯವಾಗಿರುವ ಬಿಲ್ಪಪತ್ರಿಯಲ್ಲಿ ಔಷಧೀಯ ಗುಣಗಳು ಇವೆ. ಹೀಗಾಗಿ ಆಯುರ್ವೇದದಲ್ಲಿ ಬಿಲ್ಪಪತ್ರಿ ಸಸಿಗಳನ್ನು ಔಷಧಿವಾಗಿಯೂ ಬಳಸಿಕೊಂಡು ಬರಲಾಗಿದೆ ಎಂದು ತಿಳಿಸಿದರು.
ಸದ್ಯ ಬಿಲ್ಪಪತ್ರಿ ಸಸಿಗಳ ಕೊರತೆ ಇದೆ. ಅಂತಹದ್ದರಲ್ಲಿ ಶಿವಯ್ಯ ಸ್ವಾಮಿ ಅವರು ಮಾತೆ ಕರುಣಾದೇವಿ ಅವರ ಹೆಸರಲ್ಲಿ ಹಮ್ಮಿಕೊಂಡ ಏಖ್ ಲಾಖ್ ಪೇಡ್ ಮಾ ಕೇ ನಾಮ್ ಅಭಿಯಾನ ಅಂಗವಾಗಿ ಬಿಲ್ಪಪತ್ರಿ ಸಸಿ ವಿತರಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ಗುರು ಭಕ್ತಿ ಹಾಗೂ ಪರಿಸರ ಪ್ರಜ್ಞೆ ಜಾಗೃತಗೊಳಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಅಭಿಯಾನ ನಿಮಿತ್ತ ಅನೇಕ ಕಡೆ ಪಂಚವಟಿ ನಿರ್ಮಾಣಕ್ಕೆ ಚಾಲನೆ ಕೊಡಲಾಗಿದೆ. ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಲ್ಪಪತ್ರಿ ಸೇರಿ 25 ಸಾವಿರ ಸಸಿಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಕಾಶಿ ಜಗದ್ಗುರುಗಳು ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಇನ್ನಷ್ಟು ಉತ್ಸಾಹ ಮೂಡಿಸಿದೆ. ಎಲ್ಲರ ಸಹಕಾರದೊಂದಿಗೆ ಅಭಿಯಾನ ಮುಂದುವರಿಯಲಿದೆ ಎಂದು ಹೇಳಿದರು.
ಬೇಮಳಖೇಡ-ಗೋರಟಾ-ನೌಬಾದ್‍ನ ಜ್ಞಾನ ಶಿವಯೋಗಾಶ್ರಮದ ಪೀಠಾಧಿಪತಿ ಡಾ. ರಾಜಶೇಖರ ಶಿವಾಚಾರ್ಯ ಮಾತನಾಡಿ, ವೀರಶೈವ ಲಿಂಗಾಯತ ಪರಂಪರೆ ರಕ್ಷಣೆಗೆ ಕಾಶಿ ಜಗದ್ಗುರುಗಳ ಕೊಡುಗೆ ಹಿರಿದಾಗಿದೆ. ಭಾರತ ಸೇರಿದಂತೆ ವಿವಿಧ ದೇಶಗಳ ಅಸಂಖ್ಯಾತ ಜನರಿಗೆ ವೀರಶೈವ ಲಿಂಗಾಯತ ಧರ್ಮ ದೀಕ್ಷೆ ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು
ಡಾ. ಶಿವಾನಂದ ಚಿಕ್ಕಮಠ, ಪ್ರಮುಖರಾದ ವರದಯ್ಯ ಸ್ವಾಮಿ, ಕಂಟೆಪ್ಪ ಭಂಗೂರೆ, ಮಹೇಶ ಪಾಟೀಲ, ಬಸವರಾಜ ಇಬ್ರಾಹಿಂಪುರ, ಚನ್ನಮಲ್ಲಣ್ಣ, ಜಯಪ್ರಕಾಶ್, ಪ್ರವೀಣ್ ಸ್ವಾಮಿ, ನಾಗರಾಜ ಮಠ, ಶಿವಶಂಕರ ಬೆಳಮಗಿ, ಅನಿಲ್ ಶೇರಿಕಾರ್, ನಾಗಮೂರ್ತಿ ಪಾಂಚಾಳ್, ದತ್ತ ಲಕ್ಕಾ, ಚನ್ನಪ್ಪ ಗೌರಶೆಟ್ಟಿ ಮತ್ತಿತರರು ಇದ್ದರು.