

ಬೀದರ್: ಮುಂಬರುವ ಜನಗಣತಿಯಲ್ಲಿ ಲಿಂಗಾಯತರು ಧರ್ಮದ ಕಾಲಂನಲ್ಲಿ ತಪ್ಪದೆ ಲಿಂಗಾಯತ ಎಂದೇ ಬರೆಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಮನವಿ ಮಾಡಿದ್ದಾರೆ.
ದಾವಣಗೆರೆಯಲ್ಲಿ ಈಚೆಗೆ ನಡೆದ ವೀರಶೈವ ಪೀಠಾಚಾರ್ಯ ಹಾಗೂ ಶಿವಾಚಾರ್ಯ ಶೃಂಗವು ಜನಗಣತಿಯಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕೆಂದು ಕರೆ ಕೊಟ್ಟು ಲಿಂಗಾಯತ ಸಮುದಾಯದ ದಾರಿ ತಪ್ಪಿಸುವ ಪ್ರಯತ್ನ ಮಾಡಿದೆ ಎಂದು ಆರೋಪಿಸಿದ್ದಾರೆ.
ವೀರಶೈವ ಲಿಂಗಾಯತ ಪದ ಅವೈಜ್ಞಾನಿಕವಾದದ್ದು. ತಾತ್ವಿಕ ಹಾಗೂ ಸೈದ್ಧಾಂತಿಕವಾಗಿಯೂ ಸರಿಯಾದುದ್ದಲ್ಲ. ಹೀಗಾಗಿಯೇ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ವೀರಶೈವ ಲಿಂಗಾಯತ ಹೆಸರಲ್ಲಿ ಮೂರು ಬಾರಿ ಸಲ್ಲಿಸಲಾಗಿದ್ದ ಪ್ರತ್ಯೇಕ ಧರ್ಮ ಮಾನ್ಯತೆ ಪ್ರಸ್ತಾವ ತಿರಸ್ಕಾರಗೊಂಡಿದೆ ಎಂದು ಹೇಳಿದ್ದಾರೆ.
ಕೆಲವರು ತಮ್ಮ ಸ್ವಾರ್ಥಕ್ಕಾಗಿ ಲಿಂಗಾಯತ ಸಮಾಜವನ್ನು ಬಲಿ ಕೊಡಲು ಹೊರಟಿದ್ದಾರೆ. ಸಮಾಜದ ಪರ ಕಾಳಜಿ ತೋರಿದಂತೆ ನಾಟಕವಾಡಿ, ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಲಿಂಗಾಯತ ಎಂದು ಬರೆಸುವುದರಿಂದ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಲಿದೆ. ಧರ್ಮದ ಎಲ್ಲ ಒಳ ಪಂಗಡಗಳಿಗೆ ಅಲ್ಪಸಂಖ್ಯಾತರ ಸ್ಥಾನಮಾನ ದೊರಕಲಿದೆ. ವೀರಶೈವ ಲಿಂಗಾಯತ ಎಂದು ಬರೆಸಿದರೆ ದೊಡ್ಡ ಹಿನ್ನೆಡೆ ಆಗಲಿದೆ. ಕಾರಣ, ಲಿಂಗಾಯತರು ಶೃಂಗದ ಕರೆಗೆ ಕಿವಿಗೊಡಬಾರದು ಎಂದು ಹೇಳಿದ್ದಾರೆ.
ಶ್ರೀ ಬಸವಣ್ಣನವರ ಕುರಿತು ಮಾತನಾಡದಿರಲಿ: ಬಸವಣ್ಣನವರು ವೀರಶೈವ ಧರ್ಮ ಸ್ವೀಕರಿಸಿದ್ದರೆಂದು ತಮ್ಮ ಜೀವನ ಪರ್ಯಂತ ಸುಳ್ಳು ಹೇಳುತ್ತಾ, ಇತಿಹಾಸ ತಿರುಚಲು ಪ್ರಯತ್ನಿಸುತ್ತಿರುವ ರಂಭಾಪುರಿ ಶ್ರೀಗಳು ಬಸವಣ್ಣನವರ ಕುರಿತು ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅನುಭವ ಮಂಟಪದ ಪ್ರಮಥ ಗಣಂಗಳೆಲ್ಲರ ವಚನ ಸಾಹಿತ್ಯವೇ ಬಸವಣ್ಣನವರು ಲಿಂಗವಂತ ಧರ್ಮದ ಸ್ಥಾಪಕರೆಂದು ಸಾರುತ್ತಿರುವಾಗ, ಇಡೀ ನಾಡಿಗೆ ನಾಡೇ ಅದನ್ನು ಒಪ್ಪುತ್ತಿರುವಾಗ, ಇವರು ದಾರಿ ತಪ್ಪಿಸುವ ವಿಫಲ ಪ್ರಯತ್ನ ಮಾಡುತ್ತಿರುವುದೇಕೆ, ಇದೇ ಶ್ರಮವನ್ನು ಪಂಚಾಚಾರ್ಯರ ಧರ್ಮ ಪ್ರಚಾರಕ್ಕೆ ಬಳಸಿಕೊಳ್ಳಲಿ. ಬಸಣ್ಣನವರ ಹೆಸರಿಗೆ ಬರುವುದಾದರೆ ಸರಿಯಾಗಿ ಅಧ್ಯಯನ ಮಾಡಿ ಹೇಳಿಕೆ ಕೊಡಲಿ ಎಂದು ಹೇಳಿದ್ದಾರೆ.
ಅಡ್ಡ ಪಲ್ಲಕ್ಕಿ ನಡೆಯಲು ಬಿಡಲ್ಲ: ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ ನಡೆಸಿ ಕೂಡಲಸಂಗಮ ಕ್ಷೇತ್ರವನ್ನು ಪವಿತ್ರಗೊಳಿಸುವುದಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ನೀಡಿರುವ ಹೇಳಿಕೆಗೆ ಬಸವರಾಜ ಧನ್ನೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಶಪ್ಪನವರ್ ಹೇಳಿಕೆ ಮೂರ್ಖತನದ್ದು. ಅದನ್ನು ತೀವ್ರವಾಗಿ ಖಂಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಪಂಚ ಪರುಷ ಮೂರ್ತಿಯಾದ ಬಸವಣ್ಣನವರ ಐಕ್ಯಕ್ಷೇತ್ರ ಕೂಡಲಸಂಗಮ ಅಪವಿತ್ರವಾಗಲು ಸಾಧ್ಯವಿಲ್ಲ. ಕಾಶಪ್ಪನವರ್ ಮೊದಲು ತಮ್ಮ ಬುದ್ಧಿ ಪವಿತ್ರಗೊಳಿಸಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.
ಕೂಡಲಸಂಗಮದ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲದು. ಇದನ್ನು ಮುಂದುವರಿಸಿದರೆ ಬಸವ ಭಕ್ತರ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ. ಕೂಡಲಸಂಗಮದಲ್ಲಿ ಅಡ್ಡಪಲ್ಲಕ್ಕಿ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.