ಹಜ್ ಉನ್ನತ ಮಟ್ಟದ ಆಧ್ಯಾತ್ಮ ಅನುಭವ

Haj Yatri Welcome
Published on

ಬೀದರ್: ಹಜ್ ಯಾತ್ರೆಯು ಉನ್ನತ ಮಟ್ಟದ ಆಧ್ಯಾತ್ಮ ಅನುಭವವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಮುಹಮ್ಮದ್ ನಿಝಾಮುದ್ದೀನ್ ಹೇಳಿದರು.

ಜಮಾ ಅತೆ ಇಸ್ಲಾಮಿ ಹಿಂದ್‍ನ ಬೀದರ್ ಘಟಕದ ವತಿಯಿಂದ ನಗರದ ಜುಮಅ ಮಸೀದಿಯಲ್ಲಿ ಏರ್ಪಡಿಸಿದ್ದ ಹಜ್ ಯಾತ್ರಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಜ್ ಏಕದೇವ ವಿಶ್ವಾಸಿಗರ ಅಂತರರಾಷ್ಟ್ರೀಯ ಸಮ್ಮೇಳನವಾಗಿದ್ದು, ಕಾಬಾ ದೇವ ಭವನವು ಸಕಲರಿಗೆ ಸಮೃದ್ಧಿ ಹಾಗೂ ಸನ್ಮಾರ್ಗ ದರ್ಶನದ ಕೇಂದ್ರವಾಗಿದೆ ಎಂದು ಬಣ್ಣಿಸಿದರು.

ಕಾಬಾ ಭವನದ ಪ್ರದಕ್ಷಣೆಯಿಂದ ಜೀವನ ದೇವ ಕೇಂದ್ರೀಕೃತವಾಗುತ್ತದೆ. ಕುರ್ಬಾನಿ ಒಬ್ಬ ದೇವ ಭಕ್ತ ತನ್ನನ್ನು ಸಂಪೂರ್ಣವಾಗಿ ದೇವರಿಗೆ ಅರ್ಪಿಸಿಕೊಳ್ಳುವ ಸಾಂಕೇತಿಕ ರೂಪವಾಗಿದೆ ಎಂದು ತಿಳಿಸಿದರು.

ಇಸ್ಲಾಮ್‍ನ ಐದು ಆಧಾರ ಸ್ತಂಭಗಳಲ್ಲಿ ಹಜ್ ಕೂಡ ಒಂದು. ಸಾಮಥ್ರ್ಯ ಇರುವ ಮುಸಲ್ಮಾನನು ಹಜ್ ಯಾತ್ರೆ ಕೈಗೊಳ್ಳುವುದು ಕಡ್ಡಾಯ. ಹಜ್ ಮಾಡುವುದು ಜನರ ಮೇಲೆ ಅಲ್ಲಾಹನ ಹಕ್ಕಾಗಿದೆ ಎಂದು ಕುರಾನ್‍ನಲ್ಲಿ ಹೇಳಲಾಗಿದೆ ಎಂದು ಹೇಳಿದರು.

ಹಜ್ ಸಂದರ್ಭದಲ್ಲಿ ಹೊಲೆಯದ ಎರಡು ತುಂಡು ಬಟ್ಟೆ ತೊಡುವುದು, ಸರಳ ಚಪ್ಪಲಿ ಧರಿಸುವುದು, ತಾತ್ಕಾಲಿಕ ಟೆಂಟ್‍ಗಳಲ್ಲಿ ಹಗಲು-ರಾತ್ರಿ ಕಳೆಯುವುದು, ಬಯಲಲ್ಲೇ ಮಲಗುವುದು ಮುಂತಾದವು ಸರಳ ಜೀವನಕ್ಕೆ ಪ್ರೇರಣೆ ನೀಡುತ್ತವೆ. ದೇವರ ಸಾಮಿಪ್ಯಕ್ಕೂ ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಅರಫಾ ಮೈದಾನದಲ್ಲಿ ಯಾತ್ರಿ ತನ್ನ ತಪ್ಪು ಹಾಗೂ ಪಾಪ ಕಾರ್ಯಗಳಿಗೆ ಪಶ್ಚಾತಾಪ ಪಟ್ಟು, ಭವಿಷ್ಯದಲ್ಲಿ ತಪ್ಪುಗಳಾಗದಂತೆ ಸಂಕಲ್ಪ ಮಾಡುತ್ತಾನೆ ಎಂದು ಹೇಳಿದರು.

ಸಾಂಕೇತಿಕವಾಗಿ ಮೂರು ಸೈತಾನ ಸ್ತಂಭಗಳಿಗೆ ಹರಳುಗಳಿಂದ ಹೊಡೆಯುತ್ತಾ ಅಲ್ಲಾಹನು ಮಹಾನನು ಎಂದು ಹೇಳಿ, ಜೀವನದಲ್ಲಿ ಸೈತಾನನ ದುಷ್ಪ್ರೇರಣೆಯಿಂದ ದೂರವಿರಲು ನಿರ್ಧರಿಸುತ್ತಾನೆ. ಹಜ್‍ನಲ್ಲಿ ಯಾವಾಗಲೂ ಪಠಿಸುವ ತಲ್ಬಿಯಾದಲ್ಲಿಯೂ ಏಕದೇವನೇ ಮಹಾನನು ಎಂದು ಹೇಳುತ್ತಾನೆ ಎಂದು ವಿವರಿಸಿದರು.

ಹಜ್‍ನಲ್ಲಿ ಒಂದು ಸಣ್ಣ ಕೆಡುಕನ್ನೂ ಮಾಡಬಾರದು ಎಂದು ಹೇಳಲಾಗಿದೆ. ಹೀಗಾಗಿ ಹಜ್ ಮಾಡಿದ ವ್ಯಕ್ತಿ ಜನ್ಮ ತಳೆದ ಮುಗ್ಧ ಮಗುವಿನಂತಾಗುತ್ತಾನೆ. ಜೀವನದಲ್ಲಿ ಕೆಡುಕುಗಳಿಂದ ದೂರವಿರುತ್ತಾನೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಜಮಾ ಅತೆ ಇಸ್ಲಾಮಿ ಹಿಂದ್‍ನ ಸಂಘಟನಾ ಕಾರ್ಯದರ್ಶಿ ಹಾಮೇದ್ ಮುಹಮ್ಮದ್ ಖಾನ್ ಮಾತನಾಡಿ, ಹಜ್ ಯಾತ್ರೆ ಕೈಗೊಂಡ ವ್ಯಕ್ತಿ ಅಲ್ಲಾಹನೇ ಸಾರ್ವಭೌಮ ಎಂದು ಹೇಳುತ್ತಾನೆ. ಜೀವನದಲ್ಲಿ ಅವನ ಅಧಿಪಥ್ಯ ಮಾತ್ರ ಸ್ವೀಕರಿಸುತ್ತಾನೆ. ಅವನನ್ನೇ ಆರಾಧಿಸಿ, ಅನುಸರಿಸುತ್ತಾನೆ ಎಂದು ಹೇಳಿದರು.

ಪ್ರವಾದಿ ಮುಹಮ್ಮದರು ತಮ್ಮ ವಿದಾಯ ಭಾಷಣದ ಸಂದೇಶವನ್ನು ಇತರರಿಗೆ ತಿಳಿಸಬೇಕು ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಮುಸ್ಲಿಮ್ ಸಮುದಾಯ ಸತ್ಯದ ಸಾಕ್ಷ್ಯ ವಹಿಸಬೇಕಾಗಿದೆ. ಅದಕ್ಕೆ ಸನ್ನದ್ಧರಾಗಬೇಕಿದೆ ಎಂದು ಹೇಳಿದರು.

ಹಜ್ ಯಾತ್ರಿಕನು ತನ್ನನ್ನು ತಾನು ಬದಲಿಸಿಕೊಳ್ಳಲು ಹಾಗೂ ಒಳ್ಳೆಯವನಾಗಲು ನಿರ್ಧರಿಸಬೇಕು. ಆಗ ಮಾತ್ರ ನಿಜವಾದ ದೇವ ಭಕ್ತನಾಗಬಹುದು ಎಂದು ತಿಳಿಸಿದರು.

ಹಜ್ ಯಾತ್ರಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ಜಮಾತೆ ಅತೆ ಇಸ್ಲಾಮಿ ಹಿಂದ್ ಬೀದರ್ ನಗರ ಘಟಕದ ಅಧ್ಯಕ್ಷ ಮುಹಮ್ಮದ್ ಮೌಅಝಂ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜುಮಅ ಮಸೀದಿಯ ಅಧ್ಯಕ್ಷ ಮುಹಮ್ಮದ್ ಜಾವಿದ್, ಹಜ್ ಕಮೀಟಿ ಅಧ್ಯಕ್ಷ ಸೈಯದ್ ಸಗೀರ್ ಅಹಮ್ಮದ್, ಸೈಯದ್ ಮನ್ಸೂರ್ ಅಹಮ್ಮದ್ ಖಾದ್ರಿ, ಮುಹಮ್ಮದ್ ಆಸಿಫುದ್ದೀನ್, ಗುರುನಾಥ ಗಡ್ಡೆ, ಮುಹಮ್ಮದ್ ಸಲಾವುದ್ದೀನ್, ಡಾ. ಇರ್ಷಾದ್ ನವೀದ್, ಮುಹಮ್ಮದ್ ಸನಾವುಲ್ಲಾ ಇದ್ದರು. ಮುಹಮ್ಮದ್ ಆರಿಫುದ್ದೀನ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net