

ಬೀದರ್: ಏಕ್ ಲಾಖ್ ಪೇಡ್ ಮಾ ಕೇ ನಾಮ್ ಅಭಿಯಾನ ಅಂಗವಾಗಿ ನೆರೆಯ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ನ್ಯಾಲ್ಕಲ್ ತಾಲ್ಲೂಕಿನ ಮರಿಯಂಪುರದಲ್ಲಿ ಸಾರ್ವಜನಿಕರಿಗೆ ಬಿಲ್ವಪತ್ರಿ ಸಸಿ ಉಚಿತವಾಗಿ ವಿತರಿಸಲಾಯಿತು.
ನೌಬಾದ್-ಗೋರಟಾ-ಬೇಮಳಖೇಡ ಮಠದ ಡಾ. ರಾಜಶೇಖರ ಶಿವಾಚಾರ್ಯ ಮಾತನಾಡಿ, ಬಿಲ್ವಪತ್ರಿ ಶಿವನಿಗೆ ಬಹಳ ಪ್ರಿಯವಾದದ್ದು. ಅನೇಕ ಔಷಧೀಯ ಗುಣ ಸಹ ಹೊಂದಿದೆ. ಹೀಗಾಗಿ ಅಭಿಯಾನ ನಿಮಿತ್ತ ಬಿಲ್ವಪತ್ರಿ ಸಸಿ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಪಂಚವಟಿ ಹಾಗೂ ಬಿಲ್ವಪತ್ರಿ ವನ ನಿರ್ಮಾಣ ಮಾಡಲು ಬಯಸುವವರಿಗೆ ಅಗತ್ಯ ಸಸಿ ಕೊಡಲಾಗುತ್ತಿದೆ. ಸಾರ್ವಜನಿಕರು ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ಹೇಳಿದರು.
ಈಗ ಪವಿತ್ರ ಶ್ರಾವಣ ಇದೆ. ಭಕ್ತರು ದೇವರ ಕೃಪೆಗೆ ಪಾತ್ರರಾಗಲು ಪೂಜೆ, ಜಪ, ತಪ, ಧ್ಯಾನಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಶ್ರೀಶೈಲದ ಚೈತನ್ಯ ಪೀಠದ ಮಾತೆ ಕರುಣಾದೇವಿ ಅವರ ಹೆಸರಲ್ಲಿ 1 ಲಕ್ಷ ಸಸಿ ನೆಡುವಿಕೆ ಹಾಗೂ ವಿತರಣೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ವಿವಿಧೆಡೆ 11 ಸಾವಿರ ಸಸಿಗಳನ್ನು ವಿತರಿಸಲಾಗಿದೆ ಎಂದು ಅಭಿಯಾನದ ರೂವಾರಿಯಾದ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.
ದಕ್ಷಿಣ ಭಾರತದಲ್ಲಿ ಬಿಲ್ವಪತ್ರಿ ಸಸಿಗಳು ಕಡಿಮೆ ಸಂಖ್ಯೆಯಲ್ಲಿ ಇರುವ ಕಾರಣ ಭಕ್ತರ ಅನುಕೂಲಕ್ಕಾಗಿ ಅಭಿಯಾನದಲ್ಲಿ 21 ಸಾವಿರ ಬಿಲ್ವಪತ್ರಿ ಸಸಿಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಅರಣ್ಯ ಅಧಿಕಾರಿ ಹಾವಪ್ಪ, ನ್ಯಾಲ್ಕಲ್ ಮಂಡಲ ಪ್ರಮುಖರಾದ ಬಸವರಾಜ ಪಾಟೀಲ, ಕುಶಾಲ ಪಾಟೀಲ ಗೌರಶೆಟ್ಟಿ, ಓಂಪ್ರಕಾಶ ರೊಟ್ಟೆ, ಕಂಟೆಪ್ಪ ಭಂಗೂರೆ, ಮಹೇಶ ಪಾಟೀಲ, ಕುಪೇಂದ್ರಪ್ಪ, ಸರಸ್ವತಿ, ಪತ್ರಕರ್ತರಾದ ಸಿದ್ದಣ್ಣ, ಮಲ್ಲಾರೆಡ್ಡಿ ಮತ್ತಿತರರು ಇದ್ದರು.
ಬೀದರ್‍ನ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ, ಶ್ರೀ ಜಗದ್ಗುರು ಪಂಚಾಚಾರ್ಯ ಯುವಕ ಸಂಘ, ಶ್ರೀಶೈಲದ ಅಕ್ಕ ಮಹಾದೇವಿ ಚೈತನ್ಯ ಪೀಠ, ನೌಬಾದ್‍ನ ಜ್ಞಾನ ಶಿವಯೋಗಾಶ್ರಮ ಮತ್ತು ಈಶ್ವರಿ ಮಹಿಳಾ ಮಂಡಳ ಸಹಯೋಗದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.