

ಬೀದರ್: ರೋಟರಿ ಇಂಡಿಯಾ ವತಿಯಿಂದ ದೇಶದಾದ್ಯಂತ ಗರ್ಭಕೋಶ ಹಾಗೂ ಸ್ತನ ಕ್ಯಾನ್ಸರ್‍ನಿಂದ ಬಳಲುತ್ತಿರುವ ಮಹಿಳೆಯರ ಉಚಿತ ಚಿಕಿತ್ಸೆ, ಉಚಿತ ಪ್ರತಿ ರಕ್ಷಣೆ ಚುಚ್ಚುಮದ್ದು ನೀಡಿಕೆ ಹಾಗೂ ವಿದ್ಯಾರ್ಥಿಗಳಿಗೆ 10 ಲಕ್ಷ ಉಚಿತ ಕಂಪ್ಯೂಟರ್ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ನಿಯೋಜಿತ ಗರ್ವನರ್ ಡಾ. ತ್ರಿವಿಕ್ರಮ್ ಜೋಶಿ ರಾಯಚೂರು ಹೇಳಿದರು.
ರೋಟರಿ ಕ್ಲಬ್ ಬೀದರ್ ವತಿಯಿಂದ ನಗರದ ಬ್ರಿಮ್ಸ್ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ರೋಟರಿಯ ಮಹತ್ವದ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್‍ನಲ್ಲಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ್ ಮಾತನಾಡಿ, ಬ್ರಿಮ್ಸ್ ಆಸ್ಪತ್ರೆಗೆ ನಿತ್ಯ ಸಾಕಷ್ಟು ರೋಗಿಗಳು ಹಾಗೂ ಅವರ ಸಾವಿರಾರು ಸಂಬಂಧಿಕರು ಬರುತ್ತಾರೆ. ಕೋವಿಡ್ ಸಂದರ್ಭದಲ್ಲಿ ರೋಟರಿ ಕ್ಲಬ್ ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿತ್ತು. ಇದೀಗ ಮತ್ತೆ ನೀರಿನ ಅವಶ್ಯಕತೆ ಗಮನಿಸಿ ಇನ್ನೊಂದು ಘಟಕ ಸ್ಥಾಪಿಸಿದೆ. ಕ್ಲಬ್ ಕಾರ್ಯ ಮಾದರಿಯಾಗಿದೆ ಎಂದು ಹೇಳಿದರು.
ಬ್ರಿಮ್ಸ್‍ನ ಮುಖ್ಯ ಆಡಳಿತಾಧಿಕಾರಿ ಸುರೇಖಾ ಮಾತನಾಡಿ, ರೋಟರಿ ಕ್ಲಬ್ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ. ರೋಟರಿ ಕ್ಲಬ್ ಬೀದರ್ ನಿಕಟಪೂರ್ವ ಅಧ್ಯಕ್ಷ ಸೋಮಶೇಖರ ಪಾಟೀಲ ಅವರ ಅವಧಿಯಲ್ಲಿ ಉಚಿತ ಆರೋಗ್ಯ ಶಿಬಿರ, ಪರಿಸರ ಸಂರಕ್ಷಣೆ, ಮಹಿಳಾ ಸಬಲಿಕರಣ, ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ, ಸ್ಪರ್ಧೆ, ಶಾಲಾ ಮಕ್ಕಳಿಗೆ ಬಟ್ಟೆ, ಪುಸ್ತಕ, ಕಂಪ್ಯೂಟರ್ ವಿತರಣೆ, ಶೌಚಾಲಯ ನಿರ್ಮಾಣ ಮತ್ತಿತರ ಸಾಮಾಜಿಕ ಕಾರ್ಯಗಳಾಗಿವೆ ಎಂದು ಶ್ಲಾಘಿಸಿದರು.
ರೋಟರಿ ಕ್ಲಬ್ ಬೀದರ್ ನಿಕಟಪೂರ್ವ ಅಧ್ಯಕ್ಷ ಸೋಮಶೇಖರ ಪಾಟೀಲ ಮಾತನಾಡಿ, ನನ್ನ ಒಂದು ವರ್ಷದ ಅವಧಿಯಲ್ಲಿ ದಾನಿಗಳ ಮತ್ತು ಕ್ಲಬ್ ಪದಾಧಿಕಾರಿಗಳ ಸಹಕಾರದಿಂದ ಅನೇಕ ಕಾರ್ಯಗಳು ಮಾಡಿದ್ದು, ಸಂತೃಪ್ತಿ ಉಂಟು ಮಾಡಿದೆ ಎಂದು ಹೇಳಿದರು.
ನೀರಿನ ಮಹತ್ವ ಮತ್ತು ಅದರ ಅಗತ್ಯತೆಗಳನ್ನು ಮನಗಂಡು ಬೀದರ್‍ನ ಬ್ರಿಮ್ಸ್, ಬರೀದ್‍ಶಾಹಿ ಉದ್ಯಾನ, ಬಸವ ಮಂಟಪ, ಕನ್ನಡ ಭವನ ಮತ್ತಿತರ ಕಡೆಗಳಲ್ಲಿ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಹಾವಶೆಟ್ಟಿ ಪಾಟೀಲ ಮಾತನಾಡಿ, ಬರುವ ದಿನಗಳಲ್ಲಿ ಅನೇಕ ವಿನೂತನ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸಿ. ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.
ನೀರಿನ ಘಟಕಕ್ಕೆ ಸಂಪೂರ್ಣ ದಾಸೋಹ ನೀಡಿದ ಉದ್ಯಮಿ ಶಿವಾನಂದ ಕೆ. ಪಾಟೀಲ ಹಾಗೂ ಜಗದೀಶ್ ಖೂಬಾ ಅವರನ್ನು ಗೌರವಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮತ್ತಿತರರು ಇದ್ದರು.
ರೋಟರಿ ಕ್ಲಬ್ ಬೀದರ್ ಅಧ್ಯಕ್ಷ ಬಸವಕುಮಾರ ಪಾಟೀಲ ಸ್ವಾಗತಿಸಿದರು. ಡಾ ಸುರೇಶ ಪಾಟೀಲ ನಿರೂಪಿಸಿದರು. ಕಾರ್ಯದರ್ಶಿ ಅನೀಲಕುಮಾರ ಬಿರಾದಾರ ವಂದಿಸಿದರು.