ಪಾಲಿಟೆಕ್ನಿಕ್ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೆ ಆಗ್ರಹ

Praveenkumar Meeraganjkar
Published on

ಬೀದರ್: ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಅಧ್ಯಕ್ಷ ಪ್ರವೀಣಕುಮಾರ ಮೀರಾಗಂಜ್‍ಕರ್ ಆಗ್ರಹಿಸಿದ್ದಾರೆ.

ಈ ಕುರಿತು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಅವರಿಗೆ ಬರೆದ ಮನವಿ ಪತ್ರವನ್ನು ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದ್ದಾರೆ.

ರಾಜ್ಯದ 102 ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ 1,600 ಮಂದಿ ಅತಿಥಿ ಉಪನ್ಯಾಸಕರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾಯಂ ಉಪನ್ಯಾಸಕರ ಕೊರತೆ ಇರುವ ಚಾಮರಾಜನಗರ, ಮಂಗಳೂರು, ಕಾರವಾರ, ಬೆಳಗಾವಿ ಮತ್ತಿತರ ಜಿಲ್ಲೆಗಳಲ್ಲಿ ಅತಿಥಿ ಉಪನ್ಯಾಸಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಔರಾದ್ ಪಾಲಿಟೆಕ್ನಿಕ್‍ನಲ್ಲಿ ಅಧಿಕ ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಕಾಯಂ ಉಪನ್ಯಾಸಕರ ಕೊರತೆ ಇಲ್ಲದಂತೆ ನೋಡಿಕೊಳ್ಳುತ್ತಿದ್ದಾರೆ. ಕೋರ್ಸ್‍ಗಳ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುತ್ತಿರುವುದರಿಂದ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಬೀದರ್ ಪಾಲಿಟೆಕ್ನಿಕ್‍ನಲ್ಲಿ ಕ್ಯಾಂಪಸ್ ಸಂದರ್ಶನ ಹಮ್ಮಿಕೊಳ್ಳುತ್ತಿರುವ ಕಾರಣ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ದೊರೆಯುತ್ತಿದೆ ಎಂದು ಹೇಳಿದ್ದಾರೆ.

ಈಗಾಗಲೇ ಪಂಜಾಬ್, ಹರಿಯಾಣ, ತೆಲಂಗಾಣದಲ್ಲಿ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಲಾಗಿದೆ. ರಾಜ್ಯದಲ್ಲೂ ಸರ್ಕಾರ ಹೊಸ ನೇಮಕಾತಿ ಮಾಡುವಾಗ ವಯೋಮಿತಿ ಮೀರುವ ಹಂತದಲ್ಲಿರುವ ಎಲ್ಲ ಅತಿಥಿ ಉಪನ್ಯಾಸಕರನ್ನು ಆದ್ಯತೆ ಮೇರೆಗೆ ಕಾಯಂಗೊಳಿಸಬೇಕು. ಬಳಿಕ ಉಳಿದ ಹುದ್ದೆಗಳನ್ನು ತುಂಬಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net