ಅಭಿಯಾನ ಗುರು-ಶಿಷ್ಯ ಸಂಬಂಧದ ಪ್ರತೀಕ

Ek Lakh Ped abiyan At Davangere - Copy
Published on

ಬೀದರ್: ಏಕ್ ಲಾಖ್ ಪೇಡ್ ಮಾ ಕೇ ನಾಮ್ ಅಭಿಯಾನವು ಗುರು-ಶಿಷ್ಯ ಪವಿತ್ರ ಸಂಬಂಧದ ಪ್ರತೀಕವಾಗಿದೆ ಎಂದು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ದಾವಣಗೆರೆಯಲ್ಲಿ ನಡೆದ ಪಂಚ ಪೀಠಾಧೀಶರು ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಅಭಿಯಾನ ನಿಮಿತ್ತ ಬಿಲ್ವಪತ್ರಿ ಸಸಿ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿವಯ್ಯ ಸ್ವಾಮಿ ಅವರು ಶ್ರೀಶೈಲದ ಚೈತನ್ಯ ಪೀಠದ ಮಾತೆ ಕರುಣಾದೇವಿ ಅವರ ಹೆಸರಲ್ಲಿ ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯ. ಸಮಾಜದ ಒಳಿತಿಗೆ ನಡೆಯುವ ಕಾರ್ಯಗಳಿಗೆ ಪಂಚ ಪೀಠಗಳ ಸಹಕಾರ ಸದಾ ಇರಲಿದೆ ಎಂದು ತಿಳಿಸಿದರು.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಭಿಯಾನ ಅಂಗವಾಗಿ 21 ಸಾವಿರ ಬಿಲ್ವಪತ್ರಿ ಸೇರಿ 1 ಲಕ್ಷ ಸಸಿ ವಿತರಣೆ ಹಾಗೂ ನೆಡುವಿಕೆ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.

ಗೋರಟಾ-ಬೇಮಳಖೇಡ-ನೌಬಾದ್‍ನ ಜ್ಞಾನ ಶಿವಯೋಗಾಶ್ರಮದ ಪೀಠಾಧಿಪತಿ ಡಾ. ರಾಜಶೇಖರ ಶಿವಾಚಾರ್ಯ, ಪತ್ರಕರ್ತ ಕಾಶಿನಾಥ ಜಕ್ಕಾ, ಗಣ್ಯರು ಹಾಜರಿದ್ದರು. ಭಕ್ತರಿಗೆ ಬಿಲ್ವಪತ್ರಿ ಸಸಿ ವಿತರಿಸಲಾಯಿತು.

ಬೀದರ್‍ನ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ, ಶ್ರೀ ಜಗದ್ಗುರು ಪಂಚಾಚಾರ್ಯ ಯುವಕ ಸಂಘ, ಶ್ರೀಶೈಲದ ಅಕ್ಕ ಮಹಾದೇವಿ ಚೈತನ್ಯ ಪೀಠ, ನೌಬಾದ್‍ನ ಜ್ಞಾನ ಶಿವಯೋಗಾಶ್ರಮ ಮತ್ತು ಈಶ್ವರಿ ಮಹಿಳಾ ಮಂಡಳ ಸಹಯೋಗದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net