

ಬೀದರ್: ಕಡಿಮೆ ವೆಚ್ಚದ ದೀರ್ಘ ಅವಧಿಗೆ ಬಾಳಿಕೆಗೆ ಬರುವ ಸುರಕ್ಷಿತ ಹಾಗೂ ಪರಿಸರ ಸ್ನೇಹಿ ಮನೆಗಳ ನಿರ್ಮಾಣ ಅಗತ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಇಲ್ಲಿಯ ಕೇಂದ್ರ ಬಸ್ ನಿಲ್ದಾಣ ಸಮೀಪದ ಝೀರಾ ಫಂಕ್ಷನ್ ಹಾಲ್ನಲ್ಲಿ ನಡೆಯುತ್ತಿರುವ ಬಿಲ್ಡ್ ಟೆಕ್-2025 ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿ ಅವರು ಮಾತನಾಡಿ, ಸುಸಜ್ಜಿತ ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು ಆಗಿರುತ್ತದೆ ಎಂದು ತಿಳಿಸಿದರು.
ಆಧುನಿಕ ತಂತ್ರಜ್ಞಾನ ಬಳಸಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಮನೆ ಹೇಗೆ ನಿರ್ಮಿಸಬಹುದು, ಯಾವ ರೀತಿಯ ಸಾಮಗ್ರಿಗಳು ಚೆನ್ನಾಗಿರುತ್ತವೆ ಎನ್ನುವ ಕುರಿತು ಸಲಹೆ ನೀಡಲು ಬಿಲ್ಡ್ ಟೆಕ್ ವಸ್ತು ಪ್ರದರ್ಶನ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಮನೆ ಕಟ್ಟಲು ಹಲವಾರು ಸಾಮಗ್ರಿಗಳ ಅವಶ್ಯಕತೆ ಇರುತ್ತದೆ. ದೇಶದ ಬೇರೆ ಬೇರೆ ಭಾಗಗಳ ಕಂಪೆನಿಗಳ ವಿವಿಧ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಪ್ರದರ್ಶನಕ್ಕೆ ಇಟ್ಟಿರುವುದರಿಂದ ಮನೆ ನಿರ್ಮಿಸ ಬಯಸುವವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕ್ರೆಡಾಯ್ ಬೀದರ್, ಇಂಡಿಯನ್ ಕಾಂಕ್ರೀಟ್ ಇನ್ಸ್ಟಿಟ್ಯೂಟ್ ಹಾಗೂ ಯು.ಎಸ್. ಕಮ್ಯುನಿಕೇಷನ್ಸ್ ನಿಂದ ಮುಂದಿನ ವರ್ಷವೂ ಈ ರೀತಿಯ ಪ್ರದರ್ಶನ ಹಮ್ಮಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಇಂಡಿಯನ್ ಕಾಂಕ್ರೀಟ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಹಾವಶೆಟ್ಟಿ ಪಾಟೀಲ ಮಾತನಾಡಿ, ಪ್ರದರ್ಶನ ಭಾನುವಾರವೂ ನಡೆಯಲಿದ್ದು, ಜಿಲ್ಲೆಯ ಜನರು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಕರ್ನಾಟಕ ಛಾಯಾರತ್ನ ಪ್ರಶಸ್ತಿ ಪುರಸ್ಕೃತ ಪತ್ರಿಕಾ ಛಾಯಾಗ್ರಾಹಕ ಗೋಪಿಚಂದ್ ತಾಂದಳೆ ಅವರನ್ನು ಸನ್ಮಾನಿಸಲಾಯಿತು.
ಬೀದರ್ ನಗರಾ ಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಗುರುನಾನಕ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಬಲಬೀರಸಿಂಗ್, ಕ್ರೆಡಾಯ್ ಕರ್ನಾಟಕ ಉಪಾಧ್ಯಕ್ಷ ಉದಯಶೆಟ್ಟಿ, ಬೀದರ್ ಅಧ್ಯಕ್ಷ ರವಿ ಮೂಲಗೆ, ಕಲಬುರಗಿ ಮಾಜಿ ಅಧ್ಯಕ್ಷ ನಜೀಬ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶಂಕರ ಕಾಮ ಶೆಟ್ಟಿ, ಯು.ಎಸ್. ಕಮ್ಯುನಿಕೇಷನ್ಸ್ ನ ಉಮಾಪತಿ, ಕಲ್ಮೇಶ್ ತೋಟದ ಮತ್ತಿತರು ಇದ್ದರು.