ಉದಗಿರದಲ್ಲಿ ಬಿಲ್ವಪತ್ರಿ ಸಸಿ ವಿತರಣೆ

Ek Ped Maa Ke Naam Abhiyan At Udgir
Published on

ಬೀದರ್: ಏಕ್ ಲಾಖ್ ಪೇಡ್ ಮಾ ಕೇ ನಾಮ್ ಅಭಿಯಾನ ಅಂಗವಾಗಿ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ, ಶ್ರೀ ಜಗದ್ಗುರು ಪಂಚಾಚಾರ್ಯ ಯುವಕ ಸಂಘ, ಶ್ರೀಶೈಲದ ಅಕ್ಕ ಮಹಾದೇವಿ ಚೈತನ್ಯ ಪೀಠ, ನೌಬಾದ್‍ನ ಜ್ಞಾನಶಿವಯೋಗಾಶ್ರಮ ಹಾಗೂ ಈಶ್ವರಿ ಮಹಿಳಾ ಮಂಡಳ ವತಿಯಿಂದ ಉದಗಿರದಲ್ಲಿ ಶುಕ್ರವಾರ ಸಸಿ ವಿತರಿಸಲಾಯಿತು.

ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರೂ ಆದ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಅವರು ಉದಗಿರದ ಪಶು ವೈದ್ಯಕೀಯ ಹಾಗೂ ಪಶು ವಿಜ್ಞಾನಗಳ ಕಾಲೇಜಿನಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಬಿಲ್ವಪತ್ರಿ ಸಸಿಗಳನ್ನು ವಿತರಿಸಿದರು.

ಸಮಾಜೋಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಮಾತೆ ಕರುಣಾದೇವಿ ಅವರಿಗೆ ಗೌರವ ಸಮರ್ಪಿಸಲು ಏಕ್ ಲಾಖ್ ಪೇಡ್ ಮಾ ಕೇ ನಾಮ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಭಿಯಾನದಲ್ಲಿ 21 ಸಾವಿರ ಬಿಲ್ಪಪತ್ರಿ ಸಸಿ ವಿತರಿಸಲಾಗುವುದು. ಬಿಲ್ವಪತ್ರಿ ವನಗಳ ನಿರ್ಮಾಣಕ್ಕೆ ಉತ್ತೇಜನ ನೀಡಲಾಗುವುದು ಎಂದು ಅವರು ತಿಳಿಸಿದರು.

ತಮ್ಮ ಮನವಿಯ ಮೇರೆಗೆ ಕಾಲೇಜಿನಲ್ಲಿ ಬಿಲ್ವಪತ್ರಿ ವನ ನಿರ್ಮಾಣಕ್ಕೆ ಚಾಲನೆ ನೀಡಿರುವುದು ಸಂತಸ ಉಂಟು ಮಾಡಿದೆ. ಇದಕ್ಕಾಗಿ ಕಾಲೇಜು ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಲಾಗುವುದು ಎಂದು ಹೇಳಿದರು.

ಕಾಲೇಜು ಆವರಣದಲ್ಲಿ ಬಿಲ್ವಪತ್ರಿ ವನ ನಿರ್ಮಾಣ ಹಾಗೂ ಸಸಿ ವಿತರಣೆಗೆ ಚಾಲನೆ ನೀಡಿದ ಕಾಲೇಜು ಡೀನ್ ಎನ್. ಝಡ್ ಗಾಯಕವಾಡ್ ಮಾತನಾಡಿ, ಪರಿಸರ ಸಂರಕ್ಷಣೆಗಾಗಿ ಶಿವಯ್ಯ ಸ್ವಾಮಿ ಅವರು ಧರ್ಮಗುರುಗಳ ಹೆಸರಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ 1 ಲಕ್ಷ ಸಸಿ ನೆಡುವ ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಪ್ರಾಧ್ಯಾಪಕರಾದ ಡಾ. ಗಣೇಶ ಗೋಲೆಗಾಂವಕರ್, ಡಾ. ಎ.ಡಿ. ಪಾಟೀಲ, ಸಹ ಪ್ರಾಧ್ಯಾಪಕರಾದ ಡಾ. ಮತ್ಸ್ಯಗಂಧ ಪಾಟೀಲ, ಡಾ. ಆರ್.ಡಿ. ಸೂರ್ಯವಂಶಿ, ಮುಖಂಡ ಮಹೇಶ ಪಾಟೀಲ, ಡಾ. ಎಸ್.ಜಿ. ಚೌಹಾಣ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net