ಗುರುವಿಗೆ ಭಕ್ತಿ ಸಮರ್ಪಿಸಿದ ಭಕ್ತರು

Guruvandane
Published on

ಬೀದರ್: ಇಲ್ಲಿಯ ನೌಬಾದ್‍ನ ಜ್ಞಾನ ಶಿವಯೋಗಾಶ್ರಮದಲ್ಲಿ ಈಚೆಗೆ ನಡೆದ ಗುರು ವಂದನೆ ಹಾಗೂ ಏಕ್ ಲಾಕ್ ಪೇಡ್ ಮಾ ಕೇ ನಾಮ್ ಅಭಿಯಾನ ಪ್ರಯುಕ್ತ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಭಕ್ತರು ಗುರುಗಳಿಗೆ ಭಕ್ತಿ ಸಮರ್ಪಣೆ ಮಾಡಿದರು.

ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ಅಪಾರ ಭಕ್ತರು ಶ್ರೀಶೈಲದ ಅಕ್ಕ ಮಹಾದೇವಿ ಚೈತನ್ಯ ಪೀಠದ ಅಧಿಪತಿ ಮಾತೆ ಕರುಣಾದೇವಿ ಹಾಗೂ ಜ್ಞಾನ ಶಿವಯೋಗಾಶ್ರಮದ ಅಧಿಪತಿ ಡಾ. ರಾಜಶೇಖರ ಶಿವಾಚಾರ್ಯರಿಗೆ ಶಾಲು ಹೊದಿಸಿ, ಹೂಮಾಲೆ ಹಾಕಿ ಸತ್ಕರಿಸಿ, ಪಾದ ಪೂಜೆ ಮಾಡಿ ಗೌರವಿಸಿದರು.

ಬಿಲ್ವಪತ್ರಿ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಪ್ರೊ. ಬಿ.ವಿ. ಶಿವಪ್ರಕಾಶ್ ಮಾತನಾಡಿ, ಮಾತೆ ಕರುಣಾದೇವಿ ಅವರು ಮಾನವ ಕಲ್ಯಾಣ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ತಮ್ಮ ತಪೋಶಕ್ತಿಯಿಂದ ಬಹಳಷ್ಟು ಭಕ್ತರ ಸಂಕಷ್ಟಗಳನ್ನು ಪರಿಹರಿಸಿದ್ದಾರೆ ಎಂದು ಹೇಳಿದರು.

ವಚನ ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅನೇಕ ಪುಸ್ತಕ ಪ್ರಕಟಿಸಿದ್ದಾರೆ. ಅಕ್ಕಮಹಾದೇವಿ ಹಾಗೂ ಶ್ರೀಶೈಲ ಮಲ್ಲಿಕಾರ್ಜುನರ ಕುರಿತು ಧ್ವನಿ ಸುರುಳಿ ಹೊರ ತಂದಿದ್ದಾರೆ ಆಧುನಿಕ ಅಕ್ಕಮಹಾದೇವಿ ಸ್ವರೂಪ ಆಗಿದ್ದಾರೆ ಎಂದು ಬಣ್ಣಿಸಿದರು.

ಮಾತೆ ಕರುಣಾದೇವಿ ಅವರ ಹೆಸರಲ್ಲಿ 1 ಲಕ್ಷ ಸಸಿ ನೆಡುವ ಬೃಹತ್ ಅಭಿಯಾನ ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಂ.ಡಿ. ಅಹಮ್ಮದೊದ್ದೀನ್ ಮಾತನಾಡಿ, ಡಾ. ರಾಜಶೇಖರ ಶಿವಾಚಾರ್ಯರು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ಬಹು ಅಮೂಲ್ಯ ಕೊಡುಗೆ ನೀಡಿದ್ದಾರೆ. ಜನರಿಗೆ ಭಕ್ತಿ ಮಾರ್ಗ ತೋರುತ್ತಿದ್ದಾರೆ. ಭಕ್ತರ ಉದ್ಧಾರ ಹಾಗೂ ಧರ್ಮ ರಕ್ಷಣೆಗೆ ತಮ್ಮ ಬದುಕು ಸಮರ್ಪಿಸಿಕೊಂಡಿದ್ದಾರೆ ಎಂದು ಬಣ್ಣಿಸಿದರು.

ಪುಣ್ಯವಂತರಿಗೆ ಮಾತ್ರ ಗುರುವಿನ ದರ್ಶನ ಭಾಗ್ಯ ಸಿಗುತ್ತದೆ. ಗುರು ಕರುಣೆಗೆ ಪಾತ್ರರಾದವರು ಧನ್ಯರು ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ಗುರುವಿನ ಸ್ಥಾನ ಬಹಳ ದೊಡ್ಡದು. ಹೀಗಾಗಿ ದೀಕ್ಷೆ ಗುರು ಹಾಗೂ ಮನೆ ಗುರುಗಳನ್ನು ಗೌರವಿಸುವ ಸಂಪ್ರದಾಯ ವೀರಶೈವ ಪರಂಪರೆಯಲ್ಲಿ ನಡೆದುಕೊಂಡು ಬಂದಿದೆ ಎಂದು ಹೇಳಿದರು.

ಭಕ್ತರ ಕಲ್ಯಾಣಕ್ಕಾಗಿ ಬದುಕು ಸವೆಸುವ ಗುರುವನ್ನು ಗೌರವಿಸುವುದು ಹಾಗೂ ಅವರಿಗೆ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಹೀಗಾಗಿ ಮಾತೆ ಕರುಣಾದೇವಿ ಹಾಗೂ ಡಾ. ರಾಜಶೇಖರ ಶಿವಾಚಾರ್ಯರಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

ನಾಗೇಶ್ವರಿ ಪಂಚಾಚಾರ್ಯ ಪರಂಪರೆ ಕುರಿತು ಮಾತನಾಡಿದರು. ಗಂಗಾಧರ ಸ್ವಾಮೀಜಿ ವೇದ ಘೋಷ ನಡೆಸಿಕೊಟ್ಟರು. ನಮ್ರತಾ ಹನುಮಾನ ಚಾಲಿಸಾ ಪಠಿಸಿದರು. ಸಂಜುಕುಮಾರ ಸ್ವಾಮಿ ಉಜನಿ ಹಾಗೂ ಸಾಯಿನಾಥ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷ ಷಣ್ಮುಕಯ್ಯ ಸ್ವಾಮಿ ಮರಕುಂದಾ ಅವರನ್ನು ಸನ್ಮಾನಿಸಲಾಯಿತು.

ಸಾರ್ವನಿಕರಿಗೆ ಬಿಲ್ವಪತ್ರಿ ಸೇರಿದಂತೆ ವಿವಿಧ ಬಗೆಯ ಸಸಿಗಳನ್ನು ವಿತರಿಸಲಾಯಿತು.

ನಗರಸಭೆ ಸದಸ್ಯೆ ಮಹಾದೇವಿ ಹುಮನಾಬಾದೆ, ಶಿವಕುಮಾರ ಪಾಟೀಲ ಬೆಳಕೇರಾ, ರಮೇಶ ಮಾಶೆಟ್ಟಿ, ಬಸವರಾಜ ಮರೆನಪುರೆ, ಉದ್ಯಮಿ ಬಿ.ವೈ. ಬಿರಾದಾರ, ಪರಿಸರವಾದಿ ಶೈಲೇಂದ್ರ ಕಾವಡಿ, ಡಾ. ಸಂಜಯ ದೇಶಮುಖ, ಸುಭಾಷ್ ಪಾಟೀಲ, ಡಾ. ಓಂಕಾರ ಸ್ವಾಮಿ, ಸುನೀತಾ ಭಂಗೂರೆ, ಕಾಶಿನಾಥಪ್ಪ ಶಂಭು, ಪ್ರಮುಖರಾದ ವರದಯ್ಯ ಸ್ವಾಮಿ, ಮಹೇಶ ಪಾಟೀಲ, ನಾಗರಾಜ ಮಠ, ಶಿವಶಂಕರ ಬೆಳಮಗಿ, ಮಹಾಂತೇಶ ಬಿರಾದಾರ, ಭಕ್ತಿ ದಾಸೋಹಿ ಬಸವರಾಜ ಭಂಗೂರೆ, ಕಂಟೆಪ್ಪ ಭಂಗೂರೆ, ಕಾವೇರಿ ಸ್ವಾಮಿ, ಚಾಮುಂಡೇಶ್ವರಿ ಸ್ವಾಮಿ, ಸಂಗಮೇಶ ಹುಮನಾಬಾದೆ, ಮಹಾಂತೇಶ ಡೊಂಗರಗಿ, ಕುಪೇಂದ್ರಪ್ಪ ಚಿತ್ರದುರ್ಗ, ರಮೇಶ ಅರಳಿ, ಮಲ್ಲಪ್ಪ ಬಿರಾದಾರ, ಚಂದ್ರಕಾಂತ ಬಿರಾದಾರ, ಶಂಕರೆಪ್ಪ ಬೋರಾಳೆ, ಉಮಾದೇವಿ ಹಾಲಹಳ್ಳಿ, ವಿದ್ಯಾವತಿ ಬಿರಾದಾರ, ಮಹಾದೇವಿ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಮಹಾದೇವಪ್ಪ ಭಂಗೂರೆ ಸ್ವಾಗತಿಸಿದರು. ಬಸವರಾಜ ಹಳ್ಳಿ ನಿರೂಪಿಸಿದರು. ಪ್ರಶಾಂತ ತರನಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net