

ಬೀದರ್: ಇಲ್ಲಿಯ ಸಪ್ತಗಿರಿ ಪದವಿಪೂರ್ವ ಕಾಲೇಜು ಪ್ರಸಕ್ತ ಸಾಲಿನ ಜೆಇಇ ಅಡ್ವಾನ್ಸ್ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಲಾಪ್‍ಟಾಪ್ ಕೊಡುಗೆಯಾಗಿ ನೀಡಿದೆ.
ಕಾಲೇಜಿನಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ 477ನೇ ರ್ಯಾಂಕ್ ಗಳಿಸಿ ಚೆನ್ನೈನ ಐಐಟಿಯಲ್ಲಿ ಸೀಟು ಪಡೆದ ಅಲೋಕ್ ಸಂತೋಷಕುಮಾರ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 95 ರಷ್ಟು ಅಂಕ ಗಳಿಸಿದ ವೈಷ್ಣವಿ ಎನ್. ಅವರಿಗೆ ಲಾಪ್‍ಟಾಪ್ ವಿತರಿಸಲಾಯಿತು.
ತಿರುಚರಾಪಳ್ಳಿ ಎನ್‍ಐಟಿಯಲ್ಲಿ ಸ್ಥಾನ ಗಳಿಸಿದ ಸಂದೀಪ್ ಎಂ, ಅಭಿಷೇಕ ಎಸ್, ಔರಂಗಾಬಾದ್ ಎನ್‍ಐಟಿಯಲ್ಲಿ ಸ್ಥಾನ ಪಡೆದ ಭವಾನಿ ವಿ., ಸುರತ್ಕಲ್ ಎನ್‍ಐಟಿಯಲ್ಲಿ ಸ್ಥಾನ ಗಳಿಸಿದ ಮಾರುತಿ ವಿ ಹಾಗೂ ನೀಟ್‍ನಲ್ಲಿ ಸಾಧನೆಗೈದ 10 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಸತತ ಪ್ರಯತ್ನದಿಂದ ಗುರಿ ಮುಟ್ಟಬಹುದು ಎಂದು ಕಾರ್ಯಕ್ರಮ ಉದ್ಘಾಟಿಸಿದ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ ಶಹಾಬಾದಕರ್ ಹೇಳಿದರು.
ವಿದ್ಯಾರ್ಥಿಗಳು ಮೊಬೈಲ್‍ನಿಂದ ದೂರ ಇರಬೇಕು. ಓದಿನತ್ತ ಗಮನ ಕೇಂದ್ರೀಕರಿಸಬೇಕು ಎಂದು ತಿಳಿಸಿದರು.
ಈ ವರ್ಷ ಕಾಲೇಜಿನ ಹೆಚ್ಚಿನ ವಿದ್ಯಾರ್ಥಿಗಳು ಐಐಟಿ ಹಾಗೂ ಎನ್‍ಐಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. 10 ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆದಿದ್ದಾರೆ ಎಂದು ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಗೋವಿಂದ ಡಿ. ತಾಂದಳೆ ಹೇಳಿದರು.
ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಡಿ. ತಾಂದಳೆ, ಕಾರ್ಯದರ್ಶಿ ಗೋಪಾಲ್ ಡಿ. ತಾಂದಳೆ ಉಪಸ್ಥಿತರಿದ್ದರು. ಉಪನ್ಯಾಸಕರಾದ ಅನಿಲಕುಮಾರ ಜಾಧವ್, ರಜನಿಕಾಂತ ನಿರೂಪಿಸಿದರು. ಸೀಮಾ ಕೆ. ವಂದಿಸಿದರು.