

ಬೀದರ್: ಗುರು ಪೂರ್ಣಿಮೆ ನಿಮಿತ್ತ ಇಲ್ಲಿಯ ಸಿದ್ಧಾರೂಢ ಮಠದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಭಕ್ತರು ನಾಣ್ಯಗಳಿಂದ ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ ಅವರ ತುಲಾಭಾರ ಮಾಡಿದರು.
ಮಾತೆ ಆನಂದಮಯಿ, ಬಸವರಾಜ ಡಿಗ್ಗಿ, ಸಂಗೀತಾ ಚಂದ್ರಕಾಂತ ಝರಕುಂಟೆ, ಶಿವರಾಜ ಮಾಳಶೆಟ್ಟಿ ಹಾಗೂ ಹಣಮಂತರಾಯ ಬಿರಾದಾರ ತುಲಾಭಾರ ಮಾಡಿ ಭಕ್ತಿ ಸಮರ್ಪಿಸಿದರು.
ಮಠದ ಸಾಧಕ-ಸಾಧಕಿಯರು ಷೋಡಶೋಪಚಾರ ಮೂಲಕ ಶ್ರೀಗಳ ಪಾದಪೂಜೆಗೈದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಡಾ. ಶಿವಕುಮಾರ ಸ್ವಾಮೀಜಿ ಅವರು, ಜೀವನ ಸಾರ್ಥಕಕ್ಕೆ ಪ್ರತಿಯೊಬ್ಬರೂ ಸದ್ಗುರುವಿನ ಕೃಪೆಗೆ ಪಾತ್ರರಾಗಲು ಪ್ರಯತ್ನಿಸಬೇಕು. ಪಾಲಕರು, ಪರಮಾತ್ಮ ಹಾಗೂ ಮಹಾತ್ಮರನ್ನು ದೇವರೆಂದು ತಿಳಿಯಬೇಕು ಎಂದು ಹೇಳಿದರು.
ತಂದೆ-ತಾಯಿ ಜನ್ಮಕ್ಕೆ ಕಾರಣರಾದರೆ, ಅಜ್ಞಾನ ಕಳೆದು ಸುಜ್ಞಾನ ನೀಡುವವನು ಗುರು. ಹೀಗಾಗಿ ಗುರು ದೇವರಿಗಿಂತ ದೊಡ್ಡವನು. ಗುರುವೆಂದರೆ ಜ್ಞಾನ. ಗುರು ಪೂರ್ಣಿಮೆಯು ಸದ್ಗುರುವಿನ ಉಪಕಾರ ಪಡೆದ ಶಿಷ್ಯರು ಗುರುವಿನ ದರ್ಶನ, ಸ್ಮರಣೆ ಮಾಡಿ ಧನ್ಯರಾಗುವ ಪುಣ್ಯದ ದಿನ ಎಂದು ಬಣ್ಣಿಸಿದರು.
ಕಲಬುರಗಿಯ ಮಾತೆ ಲಕ್ಷ್ಮಿದೇವಿ ಮಾತನಾಡಿ, ಗುರು ಪೂರ್ಣಿಮೆ ಗುರು-ಶಿಷ್ಯರ ಅವಿನಾಭಾವ ಸಂಬಂಧದ ಸ್ಮರಣೆಯ ದಿನ ಎಂದು ಹೇಳಿದರು.
ಸಕಲ ಜೀವರಾಶಿಗಳಲ್ಲಿ ಮಾನವ ಶ್ರೇಷ್ಠ, ಮಾಯೆ, ಮೋಹದ ಬುದ್ಧಿಯಿಂದ ಕೂಡಿದ ಮನುಷ್ಯನಿಗೆ ವಿಶೇಷ ಜ್ಞಾನ ಅನುಗೃಹಕ್ಕಾಗಿ ಪರಮಾತ್ಮ ಸ್ವತಃ ಗುರುವಿನ ರೂಪದಲ್ಲಿ ಭುವಿಯಲ್ಲಿ ಅವತರಿಸಿದನು. ಸತ್ಯದ ಸಾಕ್ಷಾತ್ಕಾರ ಮಾಡಿಕೊಳ್ಳಲು ಗುರುವಿಗೆ ಶರಣು ಹೋಗಲೇಬೇಕು ಎಂದು ಗುರುದೇವಾಶ್ರಮದ ಗಣೇಶಾನಂದ ಮಹಾರಾಜ್ ಹೇಳಿದರು.
ನಾಸಿಕದ ಮಾತೆ ಮನಿಶಾ, ನಾಗಪುರದ ಮಾತೆ ಶೋಭನಾ, ಮುಳಸಾವಳಗಿ ದಯಾನಂದ ಸ್ವಾಮೀಜಿ, ಆಳೂರಿನ ಶಂಕರಾನಂದ ಸ್ವಾಮೀಜಿ, ಸೋಲಾಪುರದ ಜಡಿಸಿದ್ದ ಸ್ವಾಮೀಜಿ, ಚಳಕಾಪುರದ ಶಿವಪ್ರಕಾಶನಂದಗಿರಿ ಸ್ವಾಮೀಜಿ, ಸ್ವಾತ್ಮಾನಂದ ಗಿರಿ ಸ್ವಾಮೀಜಿ, ಮಾತೆ ಸಿದ್ದೇಶ್ವರಿ, ಮಾತೆ ಸಂಗೀತಾ, ಬೆಳ್ಳೂರಿನ ಅಮೃತಾನಂದಮಯಿ, ಮಾತೆ ಶ್ರೀದೇವಿ ಮಾತನಾಡಿದರು.
ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಬಿ.ಜಿ ಶೆಟಕಾರ್, ಬಸವರಾಜ ಜಾಬಶೆಟ್ಟಿ, ಪ್ರಭುಶೆಟ್ಟಿ ಮುದ್ದಾ, ಶಿವಶರಣಪ್ಪ ಸಾವಳಗಿ, ಉದಯಭಾನು ಹಲವಾಯಿ, ಮಡಿವಾಳಪ್ಪ ಗಂಗಶೆಟ್ಟಿ, ಸಹಜಾನಂದ ಕಂದಗೂಳ, ಡಾ. ಆನಂದ ಜಾಬಶೆಟ್ಟಿ, ವೀರೇಖಾ ಪಾಟೀಲ, ಸುಭಾಷ್ ಉಪ್ಪೆ, ವಿನಾಯಕ ಮಹಾರಾಜ, ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ, ಭಾರತಿಬಾಯಿ ಕಣಜಿ, ಲಲಿತಾದೇವಿ ಶೆಟಕಾರ್, ಪ್ರಭು ಬೆಣ್ಣೆ, ವಿರೂಪಾಕ್ಷ ಗಾದಗಿ, ದೇವಪ್ಪ ಶಂಭು, ಗಣಪತಿ ಡಿ.ಕೆ, ಕಲ್ಯಾಣರಾವ್ ಬುಜುರಕೆ, ಶರಣಪ್ಪ ತಿರಲಾಪುರ, ಕರಬಸಪ್ಪ ಮುಸ್ತಾಪುರ, ಶಾಲಾ ಮುಖ್ಯಸ್ಥರಾದ ಡಾ. ಚಂದ್ರಕಾಂತ ಹಳ್ಳಿ, ನಾಗಪ್ಪ ಜಾನಕನೋರ, ಡಾ. ಚಂದ್ರಪ್ಪ ಭತಮುರ್ಗೆ, ಅಂಜು ಪ್ರಾಜೇಶ್, ಲಕ್ಷ್ಮಣ ಪೂಜಾರಿ, ಬಸವರಾಜ ಮ್ಯಾಗೆರಿ ಇದ್ದರು.
ರಾಜ್ಯದ ವಿವಿಧ ಜಿಲ್ಲೆ, ಮಹಾರಾಷ್ಟ್ರ, ಗೋವಾ, ತೆಲಂಗಾಣ ರಾಜ್ಯಗಳ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.