ಹೊಸಬಾಳೆ ಹೇಳಿಕೆಗೆ ತೀವ್ರ ಖಂಡನೆ

Abadul Manna Sait
Published on

ಬೀದರ್: ಸಂವಿಧಾನ ಪೀಠಿಕೆಯಿಂದ ಸಮಾಜವಾದ ಹಾಗೂ ಜಾತ್ಯತೀತ ಪದಗಳನ್ನು ಕಿತ್ತು ಹಾಕಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದತ್ತಾತ್ರೇಯ ಹೊಸಬಾಳೆ ನೀಡಿರುವ ಹೇಳಿಕೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮನ್ನಾನ್ ಸೇಠ್ ತೀವ್ರವಾಗಿ ಖಂಡಿಸಿದ್ದಾರೆ.

ಹೊಸಬಾಳೆ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ. ಅದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಾಜವಾದ ಹಾಗೂ ಜಾತ್ಯತೀತ ಪದಗಳು ಏಕೆ ಇಷ್ಟವಿಲ್ಲ, ಆರ್‍ಎಸ್‍ಎಸ್ ವಿಚಾರ ಮತ್ತು ಸಿದ್ಧಾಂತಕ್ಕೆ ಸರಿಹೋಗುವುದಿಲ್ಲವೆ, ಈ ಪದಗಳನ್ನು ತೆಗೆದು, ಬಂಡವಾಳಶಾಹಿ ಮತ್ತು ಕೋಮುವಾದ ಪದಗಳನ್ನು ಸೇರಿಸಬೇಕೆ ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸಂವಿಧಾನ ಪೀಠಿಕೆ ಅಷ್ಟೇ ಅಲ್ಲ; ಭಾರತದ ಸಂವಿಧಾನವೇ ಬೇಡವಾಗಿದೆ. ಸಂವಿಧಾನ ಸಭೆ 1949ರ ನವೆಂಬರ್ 26 ರಂದು ಸಂವಿಧಾನವನ್ನು ಅಂಗೀಕರಿಸಿದ ನಾಲ್ಕು ದಿನಗಳ ನಂತರ ಆರ್‍ಎಸ್‍ಎಸ್ ಮುಖವಾಣಿ ‘ಆರ್ಗನೈಜರ್’ ಸಂಪಾದಕೀಯದಲ್ಲಿ ಸಂವಿಧಾನವನ್ನು ಟೀಕಿಸಲಾಗಿತ್ತು. ಇದರಲ್ಲಿ ಭಾರತೀಯತೆ, ಭಾರತದ ಕಾನೂನು-ಕಟ್ಟಳೆಗಳಿಲ್ಲ. ಸಂರಕ್ಷಣೆ ಇಲ್ಲ ಎಂದು ಬರೆಯಲಾಗಿತ್ತು ಎಂದು ಹೇಳಿದ್ದಾರೆ.

ಆರ್‍ಎಸ್‍ಎಸ್ ಮುಖಂಡ ಎಂ.ಎಸ್. ಗೋಲವಾಲಕರ್ ತಮ್ಮ ‘ಬಂಚ್ ಆಫ್ ಧಾಟ್ಸ್’ ಪುಸ್ತಕದಲ್ಲಿ

ಸಂವಿಧಾನ ಪಾಶ್ಚಿಮಾತ್ಯ ರಾಷ್ಟ್ರಗಳ ಸಂವಿಧಾನದ ತುಣುಕುಗಳ ಜೋಡಣೆ ಎಂದು ಬರೆದಿದ್ದರು

ಎಂದು ಆರೋಪಿಸಿದ್ದಾರೆ.

ನಂತರವೂ ಆರ್‍ಎಸ್‍ಎಸ್ ಹಾಗೂ ಬಿಜೆಪಿ ಮುಖಂಡರು ಒಂದಿಲ್ಲೊಂದು ರೀತಿಯಲ್ಲಿ ಸಂವಿಧಾನವನ್ನು ವಿರೋಧಿಸಿದ್ದಾರೆ. ಬಹುಮತದಿಂದ ಸರ್ಕಾರ ರಚಿಸಿದರೆ ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳುತ್ತ ಬಂದಿದ್ದಾರೆ. ಹೊಸಬಾಳೆ ಇದೀಗ ಮತ್ತೆ ಅದೇ ವಿಚಾರವನ್ನು ಪುನರಾವರ್ತಿಸಿದ್ದಾರೆ ಎಂದು ತಿಳಿಸಿದ್ದಾರೆ.

ಸಂವಿಧಾನವನ್ನು ಗೌರವಿಸುವ ಭಾರತೀಯರೆಲ್ಲರೂ ಹೊಸಬಾಳೆ ಅವರ ಹೇಳಿಕೆಯನ್ನು ಖಂಡಿಸಬೇಕು

ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net