

ಬೀದರ್: ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಅವರ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ, ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಯಡಿ ಶೇ 100 ರಷ್ಟು ಪ್ರಗತಿ ಸಾಧಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿಗೆ ಪ್ರಶಂಸಾ ಪತ್ರ ನೀಡಲು ಕ್ರಮ ಕೈಗೊಂಡಿದೆ.
ರಾಜ್ಯದ ಅಭಿವೃದ್ಧಿ ವೇಗ ಹೆಚ್ಚಿಸಲು, ಐಎಎಸ್ ಅಧಿಕಾರಿಗಳಿಗೆ ಪ್ರೋತ್ಸಾಹ ಹಾಗೂ ಇತರರಿಗೆ ಪ್ರೇರಣೆ ನೀಡಲು ಕೇಂದ್ರ ಪುರಸ್ಕøತ ಯೋಜನೆಗಳಲ್ಲಿ ಶೇ 100 ರಷ್ಟು ಸಾಧನೆಗೈದ ಜಿಲ್ಲಾಧಿಕಾರಿಗಳಿಗೆ ಪ್ರಶಂಸಾ ಪತ್ರ ನೀಡಬೇಕು ಎಂದು ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದಿದ್ದ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿತ್ತು. ಮುಖ್ಯಮಂತ್ರಿ ಅವರ ಸೂಚನೆಯಂತೆ ಇದೀಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರಶಂಸಾ ಪತ್ರ ನೀಡಲು ಕ್ರಮ ಕೈಗೊಂಡಿದ್ದಾರೆ ಎಂದು ಶಿವಯ್ಯ ಸ್ವಾಮಿ ತಿಳಿಸಿದ್ದಾರೆ.
ಬೀದರ್ ಜಿಲ್ಲಾಧಿಕಾರಿ ಸೇರಿದಂತೆ ಶೇ 100 ರಷ್ಟು ಸಾಧನೆಗೈದ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಪ್ರಶಂಸಾ ಪತ್ರ ಕೊಟ್ಟು ಪ್ರೋತ್ಸಾಹಿಸಲಾಗಿದೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಇನ್ನೂ ಅನೇಕ ಯೋಜನೆಗಳನ್ನು ಸರ್ಕಾರದ ಮುಂದಿಡುವ ಉದ್ದೇಶ ಇದೆ ಎಂದು ತಿಳಿಸಿದ್ದಾರೆ.