

ಬೀದರ್: ಪಾಲಕರು ಮಕ್ಕಳಿಗೆ ಆದರ್ಶರಾಗಬೇಕು ಎಂದು ಚಿದಂಬರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಶಿವಕುಮಾರ ಸ್ವಾಮೀಜಿ ಹೇಳಿದರು.
ನಗರದ ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯಲ್ಲಿ ನಡೆದ ಚಿದಂಬರ ಚಿತ್ಕಳೆ ತಿಂಗಳ ಕಾರ್ಯಕ್ರಮ ಹಾಗೂ ಪಾಲಕರ ಸಮಾವೇಶದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮಕ್ಕಳು ಪಾಲಕರನ್ನೇ ಅನುಕರಿಸುತ್ತಾರೆ. ಹೀಗಾಗಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಪಾಲಕರ ಜವಾಬ್ದಾರಿ ಬಹಳ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಮಕ್ಕಳಿಗಿಂತ ಮುಂಚೆಯೇ ಪಾಲಕರು ಟಿವಿ, ಮೊಬೈಲ್ ನೋಡುತ್ತಾ ಕುಳಿತರೆ ಮಕ್ಕಳು ಕೂಡ ಅದನ್ನೇ ಮಾಡುತ್ತಾರೆ. ಮಗು ಶಾಲೆಯಲ್ಲಿ ವಿದ್ಯಾರ್ಜನೆ ಮಾಡಿದರೆ, ಉತ್ತಮ ಹವ್ಯಾಸ ಹಾಗೂ ಒಳ್ಳೆಯತನ ಪಾಲಕರಿಂದ ಕಲಿಯುತ್ತದೆ ಎಂದು ಹೇಳಿದರು.
ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದರೆ ಸಾಲದು. ಅವರನ್ನು ಸಂಸ್ಕಾರವಂತರನ್ನಾಗಿ ರೂಪಿಸುವುದು ಅವಶ್ಯಕವಾಗಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮಿಜಿ ನುಡಿದರು.
ಮಕ್ಕಳಲ್ಲಿ ದಯೆ, ಕರುಣೆ, ಪ್ರೀತಿ, ನೈತಿಕ ಮೌಲ್ಯಗಳನ್ನು ಬೆಳೆಸಬೇಕಿದೆ ಎಂದು ಹೇಳಿದರು.
ಪ್ರಸ್ತುತ ಮಕ್ಕಳಿಗೆ ವಿದ್ಯೆ ಜತೆಗೆ ಜೀವನ ಮೌಲ್ಯಗಳನ್ನೂ ಹೇಳಿಕೊಡುವುದು ಬಹಳ ಜರೂರಿಯಾಗಿದೆ
ಸಂಸ್ಥೆಯ ಕಾರ್ಯದರ್ಶಿ ಬಿ.ಜಿ. ಶೆಟಕಾರ್ ತಿಳಿಸಿದರು.
ಪಾಲಕರು ಮಕ್ಕಳ ಮೇಲೆ ನಿಗಾ ಇರಿಸಬೇಕು. ಮಗು ಶಾಲೆಯಲ್ಲಿ ಏನನ್ನು ಕಲಿತಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಮುಖ್ಯಶಿಕ್ಷಕ ಲಕ್ಷ್ಮಣ ಪೂಜಾರಿ ಹೇಳಿದರು.
ಪ್ರಸ್ತುತ ಮಕ್ಕಳಲ್ಲಿ ತಾಳ್ಮೆ ಇಲ್ಲ. ಆಲಸ್ಯ, ಸಿಡುಕುತನ ಹೆಚ್ಚಾಗಿದೆ. ಗುರುವಿನ ಮೇಲೆ ಭಕ್ತಿ ಇಟ್ಟುಕೊಂಡು ವಿದ್ಯೆ ಕಲಿತಾಗ ಮಾತ್ರ ಜೀವನ ಉಜ್ವಲಗೊಳ್ಳುತ್ತದೆ ಎಂದು ತಿಳಿಸಿದರು.
ಸಂಸ್ಥೆಯ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ಮಾತನಾಡಿದರು. ಪ್ರಾಚಾರ್ಯ ಡಾ. ಚಂದ್ರಪ್ಪ ಭತಮುರ್ಗೆ ಉಪಸ್ಥಿತರಿದ್ದರು.
ಬಸವರಾಜ ಮ್ಯಾಗೇರಿ ಸ್ವಾಗತಿಸಿದರು. ನಾಗನಾಥ ಬಿರಾದಾರ ನಿರೂಪಿಸಿದರು. ಗೋಪಾಲ್ ಕುಲಕರ್ಣಿ ವಂದಿಸಿದರು. ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳ ಪಾಲಕರು ಪಾಲ್ಗೊಂಡಿದ್ದರು.