

ಬೀದರ್: ಬೀದರ್‍ನಿಂದ ರಾಜಧಾನಿ ಬೆಂಗಳೂರು ಹಾಗೂ ಬೆಳಗಾವಿಗೆ ಕಲ್ಯಾಣ ರಥ ಬಸ್ ಸಂಚಾರ ಆರಂಭಿಸಬೇಕು ಎಂದು ಕನ್ನಡ ಸೇನೆ ಕರ್ನಾಟಕ ಸಂಘಟನೆ ಒತ್ತಾಯಿಸಿದೆ.
ಸಂಘಟನೆಯ ಪದಾಧಿಕಾರಿಗಳು ನಗರದಲ್ಲಿ ಬುಧವಾರ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂಖಾನ್ ಅವರಿಗೆ ಬರೆದ ಮನವಿ ಪತ್ರವನ್ನು ಸಚಿವರ ಕಚೇರಿ ಸಿಬ್ಬಂದಿಗೆ ಸಲ್ಲಿಸಿದರು.
ಬೀದರ್‍ನಿಂದ ಬೆಂಗಳೂರು ಹಾಗೂ ಬೆಳಗಾವಿಗೆ ಪ್ರಯಾಣ ಬೆಳೆಸುವವರ ಸಂಖ್ಯೆ ಅಧಿಕ ಇದೆ. ಹೀಗಾಗಿ ಎರಡೂ ನಗರಗಳಿಗೆ ಅತ್ಯಾಧುನಿಕ ಸೌಲಭ್ಯವುಳ್ಳ ಬಸ್ ಸಂಚಾರ ಶುರು ಮಾಡಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸೇನೆಯ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ ಮಂಗಲಪೇಟೆ ಹೇಳಿದರು.
ಕಲ್ಯಾಣ ರಥ ಬಸ್ ಸಂಚಾರ ಪ್ರಾರಂಭಿಸಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೂಚಿಸಬೇಕು ಎಂದು ಆಗ್ರಹಿಸಿದರು.
ಸೇನೆಯ ತಾಲ್ಲೂಕು ಘಟಕದ ಪದಾಧಿಕಾರಿಗಳು ಇದ್ದರು.