ಸೋಯಾಬೀನ್ ಬೀಜದ ಕೊರತೆಯಾಗದಿರಲಿ

Prabhu Chavan
Published on
ಔರಾದ: ಮುಂಗಾರು ಹಂಗಾಮಿನಲ್ಲಿ ಔರಾದ ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ರೈತರು ಹೆಚ್ಚಾಗಿ ಬಿತ್ತನೆ ಮಾಡಲಾಗುವ ಸೋಯಾಬೀನ್ ಬೀಜದ ಕೊರತೆಯಾಗದಂತೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಶಾಸಕ ಪ್ರಭು ಚವ್ಹಾಣ ಅವರು ಕೃಷಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪ್ರಸಕ್ತ ಹಂಗಾಮಿನಲ್ಲಿ ಬಿತ್ತನೆ ಸಮಯಕ್ಕೆ ಸರಿಯಾಗಿ ಮಳೆಯಾಗಿರುವುದರಿಂದ ಎಲ್ಲ ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ರೈತರಿಗೆ ಬಿತ್ತನೆ ಬೀಜ ಸಿಗಬೇಕು. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ನಡೆಯುತ್ತಿದೆ ಆದರೂ ಕೆಲವೆಡೆ ಸೋಯಾಬೀನ್ ಬೀಜ ಸಿಗುತ್ತಿಲ್ಲವೆಂದು ರೈತರಿಂದ ನಿರಂತರವಾಗಿ ದೂರುಗಳು ಬರುತ್ತಿವೆ. ಕ್ಷೇತ್ರಕ್ಕೆ ಬೇಕಾದಷ್ಟು ಸೋಯಾಬೀನ್ ಬೀಜ ತರಿಸಿಕೊಂಡು ಸಕಾಲಕ್ಕೆ ರೈತರಿಗೆ ಕಲ್ಪಿಸಬೇಕೆಂದು ನಿರ್ದೇಶನ ನೀಡಿದ್ದಾರೆ.
ರೈತ ಸಂಪರ್ಕ ಕೇಂದ್ರಗಳಿಗೆ ಬರುವ ರೈತರೊಂದಿಗೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸೌಜನ್ಯದಿಂದ ವ್ಯವಹರಿಸಬೇಕು. ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಬರುವ ಯಾವೊಬ್ಬ ರೈತರನ್ನು ಬರಿಗೈಯಿಂದ ಕಳುಹಿಸಬಾರದು. ಎಲ್ಲ ಗ್ರಾಮಗಳಿಗೆ ನಿಗದಿತ ದಿನಾಂಕದಂದು ಬಿತ್ತನೆ ಬೀಜ ವಿತರಿಸಬೇಕು. ಆಯಾ ದಿನದಂದು ಬಿತ್ತನೆ ಬೀಜ ಪಡೆಯದ ರೈತರಿಗೆ ಅನ್ಯ ದಿನಗಳಂದು ವಿತರಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದಿದ್ದಾರೆ.
ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದರಗಳ ಬಗ್ಗೆ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಸರಿಯಾಗಿ ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು. ಇಳುವರಿ ಹೆಚ್ಚಿಸಲು ಅಗತ್ಯ ಮಾರ್ಗದರ್ಶನ ನೀಡಬೇಕು. ಅನ್ನದಾತರಾಗಿರುವ ರೈತರಿಗೆ ಯಾವುದೇ ರೀತಿಯ ಸಮಸ್ಯೆಗಳಾಗಬಾರದು. ಅವರಿಗಾಗಿ ಇರುವ ಎಲ್ಲ ಯೋಜನೆಗಳ ಸೌಲಭ್ಯಗಳನ್ನು ತಲುಪಿಸಬೇಕು. ರೈತರಿಗೆ ಯಾವುಧೇ ರೀತಿಯ ಸಮಸ್ಯೆಗಳಾದರೆ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಸೋಯಾಬೀನ್ ಕೊರತೆಗೆ ಸಂಬಂಧಿಸಿದಂತೆ ಕೃಷಿ ಇಲಾಖೆಯ ಜಂಟಿ ನಿರ್ದೇರ್ಶಕರು, ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರೊಂದಿಗೆ ಮಾತನಾಡಿದ್ದೇನೆ. ಅವಶ್ಯಕ ಬಿತ್ತನೆ ಬೀಜ ಸಕಾಲಕ್ಕೆ ಕಲ್ಪಿಸಲಾಗುತ್ತದೆ. ಎಲ್ಲ ರೈತರಿಗೂ ಬಿತ್ತನೆ ಬೀಜ ಲಭಿಸಲಿದೆ. ರೈತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೇ ತಮ್ಮ ಕೃಷಿ ಚಟುವಟಿಕೆಗಳನ್ನು ಮುಂದುವರೆಸಬೇಕೆಂದು ಶಾಸಕರು ರೈತರಲ್ಲಿ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net