

ಬೀದರ್: ವರ್ಷಕ್ಕೆ ಒಂದು ದಿನ ಪರಿಸರ ರಕ್ಷಣೆಗೆ ಸೀಮಿತವಾಗಬಾರದು. ಪ್ರತಿನಿತ್ಯ ಪರಿಸರ ದಿನವಾಗಬೇಕು. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಬುಧವಾರ ಆಯೋಜಿಸಿದ್ದ ವನಮಹೋತ್ಸವ ಹಾಗೂ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿದ್ದ ಪರಿಸರ ಕಾಳಜಿ ಇಂದಿನ ಯುವಕರಲ್ಲಿ ಇಲ್ಲ. ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದೆ. ಹೀಗಾಗಿ ಸಸಿಗಳನ್ನು ಹೆಚ್ಚೆಚ್ಚು ನೆಟ್ಟು ಪೋಷಣೆ ಮಾಡಬೇಕು ಎಂದು ಕರೆ ನೀಡಿದರು.
ಪರಿಸರ ಎರಡು ಮುಖದ ನಾಣ್ಯದಂತೆ. ಪ್ರೀತಿ, ಮಮತೆ, ವಾತ್ಸಲ್ಯ ಒಂದು ಮುಖವಾದರೆ, ಸುನಾಮಿ, ಭೂಕಂಪ, ಚಂಡಮಾರುತ ಇನ್ನೊಂದು ಮುಖ. ನಾವು ನಿಸರ್ಗಕ್ಕೆ ಏನು ಕೊಡುತ್ತೇವೆಯೋ ಅದು ನಮಗೆ ಮರಳಿ ಬರುತ್ತದೆ. ಪರಿಸರಕ್ಕೆ ಕೆಟ್ಟದ್ದು ಮಾಡಿದರೆ ಪ್ರಕೃತಿ ವಿಕೋಪಗಳು ಸಂಭವಿಸುತ್ತವೆ ಎಂದು ಎಚ್ಚರಿಸಿದರು.
ಪರಿಸರ, ಅರಣ್ಯ ಪ್ರದೇಶ, ವನ್ಯಜೀವಿಗಳನ್ನು ರಕ್ಷಿಸಲು ಸರ್ಕಾರ ಹಲವಾರು ಅಭಿಯಾನ ಹಮ್ಮಿಕೊಳ್ಳುತ್ತಿದೆ. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು. ಪರಿಸರವನ್ನು ತಾಯಿಯಂತೆ ಪೂಜಿಸಿ ಮಗುವಿನಂತೆ ಪಾಲನೆ ಮಾಡಬೇಕು ಎಂದರು.
ಪ್ರಾದೇಶಿಕ ವಲಯ ಅರಣ್ಯಾಕಾರಿ ವಿಜಯಕುಮಾರ ಜಾಧವ್, ಸಾಮಾಜಿಕ ವಲಯ ಅರಣ್ಯಾಕಾರಿ ಶಿವಕುಮಾರ ರಾಠೋಡ್, ಅರಣ್ಯ ಅಧಿಕಾರಿಗಳಾದ ರಘುನಾಥ ರಾಠೋಡ್, ರಾಜಶೇಖರ, ಪರಶುರಾಮ ಶಾಹಪುರ, ಮುಖಂಡರಾದ ಅನೀಲಕುಮಾರ ಪನ್ನಾಳೆ, ಸುರೇಶ ಮಾಶೆಟ್ಟಿ, ಚಂದು ಮಡಕಿ, ಚಂದ್ರಯ್ಯ ಸ್ವಾಮಿ, ಅನೀಲ ಗುನ್ನಳ್ಳಿ, ವಿಜಯಕುಮಾರ ಗಣಪುರ, ದೀಪಕ ಮನ್ನಳ್ಳಿ, ಸಮದ್ ಶಾ, ಮಲ್ಲಿಕಾರ್ಜುನ ಮುಲಗಿ, ನಾಗಶೆಟ್ಟಿ ಚಟ್ನಳ್ಳಿ, ಬಕ್ಕಪ್ಪ ಲಾಲಚಡಿ, ರಮೇಶ ಕೋಳಿ, ಜಗನ್ನಾಥ ಮೂಲಗಿ, ಸಂಗಮೇಶ ಗೌಸಪುರ, ಪ್ರಾಂಶುಪಾಲ ಧನರಾಜ ಬಿರಾದಾರ್, ಪ್ರೊ.ಶರಣಪ್ಪ, ಶೈಲೇಂದ್ರ ಕಾವಡಿ ಇತರರಿದ್ದರು.