

ಬೀದರ್: ಇಲ್ಲಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ನಾಲ್ಕು ಕೋರ್ಸ್‍ಗಳಲ್ಲಿ ಅಧ್ಯಯನ ಮಾಡಬಹುದಾಗಿದೆ ಎಂದು ಪ್ರಾಚಾರ್ಯ ಡಾ. ದೇವೇಂದ್ರ ಹಂಚೆ ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡಾಟಾ ಸೈನ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್‍ನಲ್ಲಿ ಪ್ರವೇಶಕ್ಕೆ ಅವಕಾಶ ಇದೆ. ಸಿವಿಲ್ ಇಂಜಿನಿಯರಿಂಗ್ನಲ್ಲಿ 30 ಹಾಗೂ ಉಳಿದ ಮೂರು ಕೋರ್ಸ್‍ಗಳಲ್ಲಿ ತಲಾ 60 ಸೀಟುಗಳು ಇವೆ ಎಂದು ಹೇಳಿದ್ದಾರೆ.
ಕಾಲೇಜಿಗೆ ಈ ವರ್ಷ ಶೇ 90 ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷ ಶೇ 100 ರಷ್ಟು ಸೀಟುಗಳು ಭರ್ತಿಯಾಗಿದ್ದವು. ಶುಲ್ಕ ರೂ. 42,866 ಮಾತ್ರ ಇದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶಿಷ್ಯವೇತನದಿಂದ ಶುಲ್ಕ ಭರಿಸಲು ಅವಕಾಶ ಇದೆ. ಶಿಷ್ಯವೇತನ ಸೌಲಭ್ಯವೂ ಇದೆ ಎಂದು ತಿಳಿಸಿದ್ದಾರೆ.
ಕಾಲೇಜಿಗೆ ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಕೆಕೆಆರ್‍ಡಿಬಿಯಿಂದ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ. ಕೆಕೆಆರ್‍ಡಿಬಿಯಿಂದ 100 ಕಂಪ್ಯೂಟರ್ ಒದಗಿಸಿದ್ದು, ಡಿಜಿಟಲ್ ಕ್ಲಾಸ್‍ಗಳು ನಡೆಯುತ್ತಿವೆ. ಸುಸಜ್ಜಿತ ಗ್ರಂಥಾಲಯ, ಕ್ರೀಡಾ ಕೋಣೆ, ಕ್ಯಾಂಟೀನ್, 200 ವಿದ್ಯಾರ್ಥಿಗಳ ಸಾಮಥ್ರ್ಯದ ವಸತಿ ಗೃಹ ವ್ಯವಸ್ಥೆ ಇದೆ ಎಂದು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಡಿ ಮುಖ್ಯ ರಸ್ತೆಯಿಂದ ಕಾಲೇಜುವರೆಗಿನ ಸಿಸಿ ರಸ್ತೆ ಹಾಗೂ ಸುತ್ತುಗೋಡೆ ಕಾಮಗಾರಿ ಪೂರ್ಣಗೊಂಡಿದೆ. ಕಾಲೇಜಿನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವಿದೆ. ಸದ್ಯದಲ್ಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಕಾಲೇಜಿನ ಪ್ರಯೋಜನ ಪಡೆಯಬೇಕು ಎಂದು ಕೋರಿದ್ದಾರೆ.