

ಭಾಲ್ಕಿ: ರಾಜ್ಯಾದ್ಯಂತ ಸೆಪ್ಟೆಂಬರ್ನಲ್ಲಿ ಆಯೋಜಿಸಲು ಉದ್ದೇಶಿಸಿರುವ ಬಸವ ಸಂಸ್ಕೃತಿ ಅಭಿಯಾನ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ವಿವಿಧ ಬಸವಪರ ಸಂಘ-ಸಂಸ್ಥೆಗಳ ಮುಖಂಡರು, ಬಸವಾಭಿಮಾನಿಗಳು ಮನವಿ ಮಾಡಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರಿಗೆ ಪ್ರಮುಖರು ಮನವಿಪತ್ರ ಸಲ್ಲಿಸಿ, ಬಸವ ಸಂಸ್ಕೃತಿ ಅಭಿಯಾನ ಅರ್ಥಪೂರ್ಣವಾಗಿ ಜರುಗಬೇಕು. ಬಸವಾದಿ ಶರಣರ ತತ್ವಗಳನ್ನು ಗ್ರಾಮ ಮಟ್ಟಕ್ಕೆ ತಲುಪಿಸಲು ವ್ಯಾಪಕ ಪ್ರಚಾರವಾಗಬೇಕು. ಎಲ್ಲ ಬಸವಪರ ಸಂಘಟನೆಗಳನ್ನು ಒಗ್ಗೂಡಿಸಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಸಮಿತಿ ರಚಿಸಿ ಜನಸಾಮಾನ್ಯರು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಓಂಪ್ರಕಾಶ ರೊಟ್ಟೆ ಕೋರಿದರು.
ಮನವಿ ಸ್ವೀಕರಿಸಿದ ಮಾತನಾಡಿದ ಪೂಜ್ಯರು, ಬಸವ ಸಂಸ್ಕೃತಿ ಅಭಿಯಾನ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ. ಈ ಅಭಿಯಾನ ಬಸವನ ಬಾಗೇವಾಡಿಯಿಂದ ಶುರುವಾಗಿ ಬೆಂಗಳೂರಿನಲ್ಲಿ ಸಮಾವೇಶಗೊಳ್ಳಲಿದೆ ಎಂದು ತಿಳಿಸಿದರು.
ಶ್ರೀ ಗುರುಬಸವ ಪಟ್ಟದ್ದೇವರು, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣ, ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ಶಸಾಪ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಮಲ್ಲಮ್ಮ ಆರ್.ಪಾಟೀಲ್, ಪ್ರಮುಖರಾದ ಗುಂಡಪ್ಪ ಸಂಗಮಕರ್, ರಮೇಶ ಮಠಪತಿ, ಸಿ.ಎಸ್. ಗಣಾಚಾರಿ, ಜಯರಾಜ ಕೊಳ್ಳಾ, ಜಗದೀಶ್ ಬಿರಾದಾರ್, ವೀರಣ್ಣ ಕುಂಬಾರ, ಸಂತೋಷ ಹಡಪದ ಇತರರಿದ್ದರು.