

ಬೀದರ್: ಹಿಂದು ಧರ್ಮದ ರಕ್ಷಕಿ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜಯಂತ್ಯುತ್ಸವ ಜೂ.15ರಂದು ನಗರದಲ್ಲಿ ಅದ್ದೂರಿ, ಅರ್ಥಪೂರ್ಣವಾಗಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಈಶ್ವರಸಿಂಗ್ ಠಾಕೂರ್ ಹೇಳಿದರು.
ಇಲ್ಲಿನ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 9ಕ್ಕೆ ನಗರದ ಬೊಮ್ಮಗೊಂಡೇಶ್ವರ ವೃತ್ತದಿಂದ ಮೆರವಣಿಗೆ ಆರಂಭವಾಗಲಿದೆ. ನಂತರ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಹೋಳ್ಕರ್ ಪರಿವಾರದ ಶ್ರೀಮಂತ ಭೂಸೇನಸಿಂಗ್, ಸುಜಾತಾ ಸಾಗರ್ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಅಹಲ್ಯಾಬಾಯಿ ಹೋಳ್ಕರ್ ಅವರು ದೇಶದ ಸಾವಿರಾರು ಹಿಂದು ದೇವಾಲಯ ಹಾಗೂ ಪುಣ್ಯ ಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಹಿಂದು ಧರ್ಮದ ರಕ್ಷಣೆಗೆ ನಿಂತಿದ್ದರು. ಚಿಕ್ಕ ವಯಸ್ಸಿನಲ್ಲಿ ವಿಧವೆಯಾದರೂ ಸಮಾಜ ಸೇವೆ ಮಾಡಿದ್ದು ಜೀವಂತ ಇತಿಹಾಸ ನಮ್ಮ ಕಣ್ಣ ಮುಂದಿದೆ. ಅವರ ಜೀವನ ಚರಿತ್ರೆ ಜನರಿಗೆ ತಿಳಿಸುವ ಉದ್ದೇಶದಿಂದ ಜಯಂತಿ ಸಂಘಟಿಸಲಾಗಿದೆ ಎಂದು ತಿಳಿಸಿದರು.
ಜಯಂತಿ ಉತ್ಸವ ಸಮಿತಿ ಗೌರವಾಧ್ಯಕ್ಷ ಪಂಡಿತ್ ಚಿದ್ರಿ ಮಾತನಾಡಿ, ದೇಶದಲ್ಲಿ ದೇವಸ್ಥಾನ, ಮಠಗಳನ್ನು ಜಿರ್ಣೋದ್ಧಾರ ಮಾಡಿದ್ದು ಅಹಳ್ಯಾಬಾಯಿ ಅವರಿಗೆ ಸಲ್ಲುತ್ತದೆ. ಖಾನಾಪುರದಲ್ಲಿರುವ ಮೈಲಾರ ಮಲ್ಲಣ್ಣ ದೇವಸ್ಥಾನದ ಮುಂಭಾಗದ ಮೇಲ್ಛಾವಣಿ ಅವರು ನಿರ್ಮಿಸಿದ್ದಾರೆ. ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಹಾಲುಮತ ಸಮಾಜದಲ್ಲಿ ಜನಿಸಿದ ಅಹಲ್ಯಾಬಾಯಿ ಅವರ ಚರಿತ್ರೆಯನ್ನು ಜನಮನಕ್ಕೆ ತಲುಪಿಸಬೇಕೆಂಬ ಉದ್ದೇಶದಿಂದ ಜಯಂತಿ ಆಚರಿಸಲಾಗುತ್ತಿದೆ ಎಂದು ಹೇಳಿದರು
ಪ್ರಮುಖರಾದ ಬಾಲಾಜಿ ನಾಯಕ್, ವೆಂಕಟರಾವ ಡೊಂಬಾಳೆ, ಮಾಳಪ್ಪ ಅಡಸಾರೆ, ಹಣಮಂತರಾವ, ವಿಜಯಕುಮಾರ ಡುಮ್ಮೆ, ಕೊಂಡಿಬಾ ಪಾಂಡ್ರೆ, ಎಂ.ಎಸ್. ಕಟಗಿ, ಸಿದ್ದೊಬಾ ಲವಟೆ, ವೆಂಕಟ ಸಾಲಿ ಇತರರಿದ್ದರು.