

ಬೀದರ್: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಕ್ರಮವಾಗಿ ಗೋಹತ್ಯೆ ಮತ್ತು ಸಾಗಣೆ ತಡೆಯಬೇಕು ಎಂದು ವಿಶ್ವ ಹಿಂದು ಪರಿಷತ್ನ ಉತ್ತರ ಪ್ರಾಂತ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ ಆಗ್ರಹಿಸಿದರು.
ಗೋಹತ್ಯೆ ನಿಷೇಧ ಕಾಯ್ದೆ ಪ್ರಕಾರ ಅಧಿಕಾರಿಗಳು ಕೆಲಸ ಮಾಡಬೇಕು. ನಿರ್ಲಕ್ಷಿಸಿದರೆ ಆ ಕೆಲಸ ನಾವು ಮಾಡಬೇಕಾಗುತ್ತದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಯಲ್ಲಿದ್ದು, ಕಟ್ಟುನಿಟ್ಟಾಗಿ ಪಾಲಿಸಿದರೆ ಗೋಹತ್ಯೆ ತಡೆಯಬಹುದು. ಆದರೆ ಕೆಲವೆಡೆ ಅಕ್ರಮ ಮುಂದುವರಿದಿದೆ. ಇದೀಗ ಬಕ್ರೀದ್ ನಿಮಿತ್ತ ಗೋಹತ್ಯೆ, ಸಾಗಣೆ ನಡೆಯುವ ಸಾಧ್ಯತೆ ಇದ್ದುದರಿಂದ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಚುರುಕುಗೊಳಿಸಬೇಕೆಂದು ಒತ್ತಾಯಿಸಿದರು.
ಕೆಲ ಸೀಮಿತ ಪ್ರದೇಶಗಳಲ್ಲಿ ಗೋಹತ್ಯೆ ಹೆಚ್ಚಾಗಿ ನಡೆದಿದೆ. ಅಂಥ ಪ್ರದೇಶಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಡಬೇಕು. ಗೋಹತ್ಯೆ ನಿಷೇಧ ಹಾಗೂ ಸಂರಕ್ಷಣಾ ಕಾಯ್ದೆ ಅನ್ವಯ ಕ್ರಮಕ್ಕೆ ಮುಂದಾಗಬೇಕು. ಅಗತ್ಯ ಕ್ರಮದ ಕುರಿತು ಚರ್ಚಿಸಲು ಪೊಲೀಸ್, ಪ್ರಾದೇಶಿಕ ಸಾರಿಗೆ, ಪಶು ಸಂಗೋಪನೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ನಿಯಮದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಒಂದು ವೇಳೆ ಕಾನೂನು ಉಲ್ಲಂಘಿಸಿ ಇಂಥ ಪ್ರಕರಣ ನಡೆದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಬೇಕಾದೀತು ಎಂದು ಗುಡುಗಿದರು.
ಪರಿಷತ್ ಪ್ರಾಂತೀಯ ಕಾರ್ಯಕಾರಿಣಿ ಸದಸ್ಯ ರಾಮಕೃಷ್ಣನ್ ಸಾಳೆ, ವಿಭಾಗೀಯ ಕಾರ್ಯದರ್ಶಿ ಅಂಬರೀಶ್ ಸೂಲೆಗಾಂವೆ, ಬಜರಂಗ ದಳ ಜಿಲ್ಲಾ ಸಂಯೋಜಕ ಭೀಮಣ್ಣ ಸೊರಳ್ಳಿ, ಪ್ರಮುಖರಾದ ಸತೀಶ್ ನೌಬಾದೆ, ಸಂಗಮೇಶ ಗಾದಗಿ, ಬಸವರಾಜ ಯದಲಾಪುರೆ, ವೀರೇಂದ್ರ ಶಾಸ್ತ್ರಿ ಇತರರಿದ್ದರು.