

ಬೀದರ್: ರೈಲ್ವೆ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಅರ್ಜಿಯಲ್ಲಿ ಕನ್ನಡ ಕಡೆಗಣನೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಸೋಮವಾರ ಇಲ್ಲಿಯ ರೈಲು ನಿಲ್ದಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಟಿಕೆಟ್ ಕಾಯ್ದಿರಿಸುವ ಅರ್ಜಿ ಹಿಡಿದು ಸ್ಟೇಷನ್ ಮಾಸ್ಟರ್ ಬಳಿಗೆ ಹೋದ ಪದಾಧಿಕಾರಿಗಳು, ಅರ್ಜಿಯಲ್ಲಿ ಇಂಗ್ಲಿಷ್, ಹಿಂದಿ, ತೆಲುಗು ಭಾಷೆಗಳಷ್ಟೇ ಇದ್ದು, ಕನ್ನಡವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು. ಅರ್ಜಿಯ ಪ್ರತಿಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾದೇಶಿಕ ಭಾಷೆಯಲ್ಲಿ ಮುಂಗಡ ಟಿಕೆಟ್ ಅರ್ಜಿಗಳಿರಬೇಕೆಂಬ ಆದೇಶವಿದೆ. ಆದರೆ, ಸ್ಥಳೀಯ ಅಧಿಕಾರಿಗಳು ಕನ್ನಡವನ್ನು ಅಲಕ್ಷಿಸಿರುವುದು ಸರಿಯಲ್ಲ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ತೀವ್ರ ಅಸಮಾಧಾನ ಹೊರಹಾಕಿದರು.
ಬಳಿಕ ಅಧಿಕಾರಿಗಳು ಕನ್ನಡದಲ್ಲಿ ಅರ್ಜಿ ಮುದ್ರಿಸಿ, ವೇದಿಕೆಯ ಪದಾಧಿಕಾರಿಗಳ ಕೈಯಿಂದ ಪ್ರಯಾಣಿಕರಿಗೆ ಕೊಡಿಸಿದರು.
ಮುಂಗಡ ಟಿಕೆಟ್ ಕಾಯ್ದಿರಿಸುವ ಅರ್ಜಿ ಹರಿದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಾಗೂ ಸಂಜೆ ಯಶವಂತಪುರ-ಬೀದರ್ ಎಕ್ಸ್‍ಪ್ರೆಸ್ ರೈಲು ತಡೆದು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ರೈಲ್ವೆ ಅಧಿಕಾರಿಗಳು ತಪ್ಪಾಗಿದೆ ಎಂದು ಒಪ್ಪಿಕೊಂಡು, ಎರಡು ಗಂಟೆಗಳಲ್ಲೇ ಕನ್ನಡದಲ್ಲಿ ಅರ್ಜಿ ಮುದ್ರಿಸಿದ್ದಾರೆ. ಸ್ಟೇಷನ್ ಮಾಸ್ಟರ್ ಒಂದು ತಿಂಗಳಲ್ಲಿ ಕನ್ನಡ ಕಲಿಯುವ ಭರವಸೆ ಕೊಟ್ಟಿದ್ದಾರೆ ಎಂದು ಸೋಮನಾಥ ಮುಧೋಳ ತಿಳಿಸಿದರು.
ರೈಲ್ವೆ ನಿಲ್ದಾಣ ಆವರಣದಲ್ಲಿ ಇರುವ ಅನ್ಯ ಭಾಷೆ ನಾಮಫಲಕಗಳನ್ನು ವಾರದೊಳಗೆ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ವೇದಿಕೆಯ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಸೋಮಶೇಖರ ಸಜ್ಜನ್, ಉದಯಕುಮಾರ ಅಷ್ಟೂರೆ, ಶಿವರುದ್ರ ಕೀರ್ತಾ, ಮಲ್ಲಿಕಾರ್ಜುನ ಸಿಕೇನಪುರೆ, ಪ್ರಧಾನ ಕಾರ್ಯದರ್ಶಿ ಉದಯಕುಮಾರ ಅಷ್ಟೂರೆ, ಕಾರ್ಯದರ್ಶಿ ಸಚಿನ್ ಬೆನಕನಳ್ಳಿ, ಮುಖಂಡ ವಿನಾಯಕ ರೆಡ್ಡಿ ಬುಧೇರಾ ಇದ್ದರು.