

ಬೀದರ್: ತಾಲ್ಲೂಕಿನ ಕಮಠಾಣ ಸಮೀಪ ಇರುವ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯವನ್ನು ಕೃಷಿ ವಿಶ್ವವಿದ್ಯಾಲಯದಲ್ಲಿ ವಿಲೀನಗೊಳಿಸುವುದಕ್ಕೆ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಅಭಿಪ್ರಾಯ ಆಲಿಕೆಗೆ ಶನಿವಾರ ಪಶು ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಟಿ.ಎಂ. ವಿಜಯಭಾಸ್ಕರ್ ಅಧ್ಯಕ್ಷತೆಯ ಐವರ ಕೃಷಿ, ತೋಟಗಾರಿಕೆ ಹಾಗೂ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಪುನರ್ ಸಂಘಟನೆ ಉನ್ನತಾಧಿಕಾರ ಸಮಿತಿಗೆ ಅವರು ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ರಚಿಸಲಾಗಿದ್ದ ಡಾ. ನಂಜುಂಡಪ್ಪ ವರದಿ ಹಾಗೂ ಜನರ ಬೇಡಿಕೆ ಹಿನ್ನೆಲೆಯಲ್ಲಿ ಬೀದರ್‍ನಲ್ಲಿ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಸಮಗ್ರತೆಯ ಹೆಸರಲ್ಲಿ ಪಶು ವೈದ್ಯಕೀಯ ವಿಶ್ವವಿದ್ಯಾಲಯವನ್ನು ಕೃಷಿ ವಿಶ್ವವಿದ್ಯಾಲಯದೊಂದಿಗೆ ವಿಲೀನಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಸಮಿತಿಯ ಅಧ್ಯಕ್ಷ ಟಿ.ಎಂ. ವಿಜಯಭಾಸ್ಕರ್ ಅವರ ಗಮನ ಸೆಳೆದರು.
ಪಶು ವೈದ್ಯಕೀಯ ವಿಶ್ವವಿದ್ಯಾಲಯ ಜಿಲ್ಲೆಯ ಪಶು ಸಂಪತ್ತು ಹಾಗೂ ರೈತರ ಏಳಿಗೆಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ದೇಸಿ ತಳಿಗಳ ಸಂವರ್ಧನೆಗೆ ಶ್ರಮಿಸುತ್ತಿದೆ. ಕರ್ನಾಟಕ, ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರದ ಪಶುಗಳಿಗೆ ವೈದ್ಯಕೀಯ ಸೇವೆ ಜತೆಗೆ ಪಶು ಪಾಲನೆಗೆ ಸಂಬಂಧಿಸಿದಂತೆ ರೈತರಿಗೆ ಮಾರ್ಗದರ್ಶನ ನೀಡುತ್ತಿದೆ ಎಂದು ಹೇಳಿದರು.
ರಾಜ್ಯದ ಏಕೈಕ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಇದಾಗಿದೆ. ಹಿಂದುಳಿದ ಪ್ರದೇಶ ಎಂಬ ಕಾರಣಕ್ಕೆ ಸರ್ಕಾರ ಈ ಭಾಗಕ್ಕೆ ವಿಶ್ವವಿದ್ಯಾಲಯ ಕೊಟ್ಟು, ಈಗ ಕಸಿದುಕೊಂಡರೆ ಅದಕ್ಕೆ ಅರ್ಥವೇ ಇರುವುದಿಲ್ಲ. ಹಾಗೆ ಮಾಡಿದರೆ ಈ ಭಾಗಕ್ಕೆ ದೊಡ್ಡ ಅನ್ಯಾಯವಾಗಲಿದೆ ಎಂದು ತಿಳಿಸಿದರು.
ವಿಲೀನಗೊಳಿಸಿದರೆ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಮಹತ್ವ ಕಳೆದುಕೊಳ್ಳುತ್ತದೆ. ಹೈನುಗಾರಿಕೆ ಕ್ಷೇತ್ರಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ. ಪಶು ವೈದ್ಯಕೀಯ ಕ್ಷೇತ್ರದೊಂದಿಗೆ ರಾಜ್ಯದ ಆರ್ಥಿಕ ಬೆಳವಣಿಗೆ ಮೇಲೂ ಪರಿಣಾಮ ಉಂಟಾಗುತ್ತದೆ. ಈಗಾಗಲೇ ವಿಶ್ವವಿದ್ಯಾಲಯವನ್ನು ವಿಲೀನ ಮಾಡದಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ. ವಿಲೀನಕ್ಕೆ ತಮ್ಮ ವಿರೋಧವಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಕೂಡಲೇ ವಿಲೀನ ಪ್ರಕ್ರಿಯೆಯನ್ನು ಕೈಬಿಡಬೇಕು. ಇಲ್ಲವಾದರೆ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ತಿಳಿಸಿದರು.
ಅಭಿಪ್ರಾಯ ಸಂಗ್ರಹದ ವೇಳೆ ಪಶು ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು, ರೈತರು ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ವಿಶ್ವವಿದ್ಯಾಲಯವನ್ನು ವಿಲೀನಗೊಳಿಸಬಾರದೆಂದು ಸಮಿತಿ ಎದುರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಶಿವಯ್ಯ ಸ್ವಾಮಿ ಹೇಳಿದ್ದಾರೆ.
ವಿಶ್ವವಿದ್ಯಾಲಯದ ಕುಲಪತಿ ಕೆ.ಸಿ. ವೀರಣ್ಣ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಸಾಲಿಮಠ, ಪ್ರಮುಖರಾದ ಓಂಪ್ರಕಾಶ ರೊಟ್ಟೆ, ಜಗದೀಶ್ವರ ಬಿರಾದಾರ ಇದ್ದರು.